ಡಿ.12ರಿಂದ 15ರ ವರೆಗೆ ಗೊಮ್ಮಟಗಿರಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ

Statue_of_Bahubali_at_Gommatagiri,_Mysore
Published on

ಮೈಸೂರು: ಹುಣಸೂರು ತಾಲೂಕು ಗೊಮ್ಮಟಗಿರಿಯಲ್ಲಿ ಡಿ.12ರಿಂದ 15ರ ವರೆಗೆ ಭಗವಾನ್ ಬಾಹುಬಲಿಗೆ 75ನೇ ಮಹಾಮಸ್ತಕಾಭಿಷೇಕ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ.

ಡಿ.12ರಂದು ಪೂರ್ವಭಾವಿ ಸಭೆ, ಸಿದ್ಧತಾ ಕಾರ್ಯ ನಡೆಯಲಿದ್ದು, ಡಿ.13, 14, 15ರ ಮೂರೂ ದಿನ ಬೆಳಗ್ಗೆ 11ಕ್ಕೆ ಮಹಾ ಮಸ್ತಕಾಭಿಷೇಕ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮನ್ಮಥ್‌ರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ.13ರಂದು ಬೆಳಗ್ಗೆ 10.30ಕ್ಕೆ ಕನಕಗಿರಿಯ ಶ್ರೀಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜದ ಡಾ.ಶ್ರೀದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಚಿವ ಡಿ.ಸುಧಾಕರ್ ಇತರರು ಭಾಗವಿಸುವರು. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಡಿ.14ರಂದು ಮಧ್ಯಾಹ್ನ 2ಕ್ಕೆ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು. ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸುವರು. ಸಚಿವರಾದ ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ ಇತರರು ಭಾಗವಹಿಸಲಿದ್ದಾರೆ ಎಂದರು.

ಡಿ.15ರಂದು ಬೆಳಗ್ಗೆ 10.30ಕ್ಕೆ ಬೃಹತ್ ಸಭಾಂಗಣ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಸಮಸ್ತ ಭಟ್ಟಾರಕರ ಸಾನ್ನಿಧ್ಯದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ವಿವೇಕಾನಂದ, ಮಾಜಿ ಸದಸ್ಯ ಗೋ.ಮಧುಸೂದನ ಇತರರು ಭಾಗವಹಿಸುವರು ಎಂದು ಹೇಳಿದರು.

ಮೂರು ದಿನಗಳ ಕಾಲ ಎಳನೀರು, ಕಬ್ಬಿನಹಾಲು, ಹಾಲು, ಮೊಸರು, ಶ್ರೀಗಂಧ, ಕಷಾಯ, ಅರಿಶಿಣ ಮೊದಲಾದ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಜರುಗಲಿದೆ. ಕೆಎಸ್‌ಆರ್‌ಟಿಸಿಯಿಂದ ಮೂರು ದಿನ ವಿಶೇಷ ಬಸ್ ವ್ಯವಸ್ಥೆಗೆ ಕೋರಲಾಗಿದೆ ಎಂದು ತಿಳಿಸಿದರು.

ಸಮಿತಿ ಪದಾಧಿಕಾರಿಗಳಾದ ಎಸ್.ಎಂ.ಪ್ರಕಾಶ್‌ಬಾಬು, ಧರಣೇಂದ್ರನ್, ಪ್ರಭಾಕರ್, ಸಂತೋಷ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net