

ಹುಬ್ಬಳ್ಳಿ : ಇಲ್ಲಿಗೆ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ನಿರ್ವಿುಸಿರುವ ಒಂಬತ್ತು ತೀರ್ಥಂಕರರ ಮೂರ್ತಿಗಳಿಗೆ ಶುಕ್ರವಾರ ಮಹಾಮಸ್ತಕಾಭಿಷೇಕ ನೆರವೇರಿತು.
12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಆಯೋಜಿಸಲಾಗುತ್ತಿದ್ದು, ನವಗ್ರಹ ಕ್ಷೇತ್ರ ನಿರ್ಮಾಣದ ನಂತರ ಇದು ಎರಡನೇ ಮಹಾಮಸ್ತಕಾಭಿಷೇಕವಾಗಿದೆ.
ಆಚಾರ್ಯ ಶ್ರೀ ಕುಂಥುಸಾಗರ ಮುನಿ ಮಹಾರಾಜರು, ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಹಲವಾರು ಆಚಾರ್ಯ ಮುನಿಗಳು, ಮಾತಾಜಿಯವರು, ಭಟ್ಟಾರಕರ ಸಮ್ಮುಖದಲ್ಲಿ ನವಗ್ರಹಗಳಲ್ಲಿ ಸ್ಥಾಪಿತವಾದ ತೀರ್ಥಂಕರರ ಮೂರ್ತಿಗಳಿಗೆ ಮಹಾಮಸ್ತಕಾಭಿಷೇಕ ನೆರವೇರಿತು.
ನವಗ್ರಹಗಳ ಮೇಲೆ ಸ್ಥಾಪಿತಗೊಂಡಿರುವ ಭಗವಾನ್ ಪಾರ್ಶ್ವನಾಥ, ಭಗವಾನ್ ಪದ್ಮಪ್ರಭು, ಭಗವಾನ್ ಚಂದ್ರಪ್ರಭು, ಭಗವಾನ್ ಪುಷ್ಪದಂತ, ಭಗವಾನ್ ಮಹಾವೀರ, ಭಗವಾನ್ ನೇಮಿನಾಥ, ಭಗವಾನ್ ಮುನಿಸುರತ್ನ, ಭಗವಾನ್ ಮಲ್ಲಿನಾಥ ಹಾಗೂ ಭಗವಾನ್ ವಾಸುಪೂಜ್ಯ ತೀರ್ಥಂಕರರ ಮೂರ್ತಿಗಳಿಗೆ ಮೊದಲು ಜಲಾಭಿಷೇಕ ನಡೆಯಿತು.
ನಂತರ ಎಳೆನೀರಿನ ಅಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ಹಾಲು, ಹಳದಿ, ಕುಂಕುಮ, ಕರ್ಪರ, ಗಿಡಮೂಲಿಕೆಗಳ ಮಿಶ್ರಿತ ಜಲಗಳಿಂದ ಹಾಗೂ ಇನ್ನಿತರ ಪದಾರ್ಥಗಳಿಂದ ಒಂಬತ್ತೂ ತೀರ್ಥಂಕರರಿಗೆ ಏಕ ಕಾಲಕ್ಕೆ ಮಸ್ತಕಾಭಿಷೇಕ ನಡೆಯಿತು.
ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಮಾರ್ಗದರ್ಶನದಲ್ಲಿ ವಾದ್ಯ, ಭಕ್ತಿಸಂಗೀತದ ಮಧ್ಯೆ ನಡೆಯುತ್ತಿದ್ದ ಮಸ್ತಕಾಭಿಷೇಕ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು. ರಾಜ್ಯ, ಹೊರ ರಾಜ್ಯಗಳಷ್ಟೇ ಅಲ್ಲದೇ ಅಮೆರಿಕ, ಜಪಾನ್ ಹಾಗೂ ಇನ್ನಿತರ ದೇಶಗಳ ಜೈನ ಸಮಾಜದವರು ವರೂರಿಗೆ ಆಗಮಿಸಿ ಕಣ್ತುಂಬಿಕೊಂಡರು. ಶ್ರಾವಕ, ಶ್ರಾವಕಿಯರಿಂದ ‘ಭಗವಾನ್ ಪಾರ್ಶ್ವನಾಥ ಕೀ ಜೈ.., ಅಹಿಂಸಾ ಪರಮೋ ಧರ್ಮಕೀ ಜೈ...’ ಮತ್ತಿತರ ಘೋಷಣೆಗಳು ಕೇಳಿಬಂದವು.
ನವಗ್ರಹ ತೀರ್ಥಂಕರರ ಮೂರ್ತಿಗಳ ಮೇಲೆ ಹಾಗೂ ಸುಮೇರು ಪರ್ವತದ ಮೇಲೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಪ್ರಯತ್ನದಿಂದ ವರೂರು ಧಾರ್ವಿುಕ ಕ್ಷೇತ್ರವಾಗಿ ಬದಲಾವಣೆಗೊಂಡಿದೆ ಎಂದರು.
ಇದಕ್ಕೂ ಮೊದಲು ಲೋಕಸಭೆ ಅಧ್ಯಕ್ಷ ಓಂ ಪ್ರಕಾಶ ಬಿರ್ಲಾ ಅವರು ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗೆ ಸಾಂಕೇತಿಕವಾಗಿ ಮಸ್ತಕಾಭಿಷೇಕ ಮಾಡುವ ಮೂಲಕ ನವಗ್ರಹ ಕ್ಷೇತ್ರದ ಎರಡನೇ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು.