ಊರು ಕಾಯುವ ದೇವ

27kkr1( mahalingeswara temple (1)
Published on

ಕಿಕ್ಕೇರಿ: ವೇದಾಗಮ, ಆಗಮಿಕರು, ಋತ್ವಿಕರು, ಶಾನುಭೋಗರು, ಜ್ಯೋತಿಷ್ಯ ಪಂಡಿತರು ನೆಲೆಸಿದ, ಹತ್ತಾರು ದೇಗುಲಗಳ ಬೀಡಿನ ಗ್ರಾಮ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮವಾಗಿದೆ. ಹಿಂದೆ ಪುರವಾಗಿ ವೈಶಿಷ್ಟ್ಯತೆಯ ಆಗರವಾಗಿ ಹೇಮಾವತಿ ನದಿಯ ತಟದಲ್ಲಿತ್ತು. ಸದಾ ವೇದಘೋಷ ಪಠಣೆಯಿಂದ ಮುಕ್ಕಣೇಶ್ವರ ಮಹಾಲಿಂಗೇಶ್ವರನಾಗಿ ನೆಲೆಸಿ ಊರು ಕಾಯುವ ದೇವನಾಗಿದ್ದಾನೆ.

ಪುರವಾಗಿದ್ದ ಗ್ರಾಮದಲ್ಲಿ ಬಲು ಹಿಂದೆ ಮಹಾಲಿಂಗೇಶ್ವರ ದೇಗುಲ ಸ್ಥಾಪನೆಯಾಗಿದ್ದರಿಂದ ಮಹಾಲಿಂಗಪುರ ಎಂದು ಕರೆಯಲಾಗುತ್ತಿತ್ತು. ಕಾಲಾನಂತರ ಮಾದಾಪುರವಾಗಿ ಸ್ಥಳನಾಮ ಬದಲಾಗಿದೆ. ತ್ರಯಂಭಕೇಶ್ವರ, ಕೆಂಕೇರಮ್ಮ, ಸಿಂಗಮ್ಮ, ಲಕ್ಷ್ಮೀದೇವಿ, ಆಂಜನೇಯ, ಮಾರಮ್ಮ, ವೀರಭದ್ರೇಶ್ವರ, ಚನ್ನಿಗರಾಯ ದೇಗುಲಗಳು ಇಡೀ ಗ್ರಾಮವನ್ನೇ ದೇಗುಲಗಳ ತವರೂರಿನಂತೆ ಕರೆಯಲ್ಪಟ್ಟಿವೆ. ಗ್ರಾಮದ ನಾಲ್ಕು ದಿಕ್ಕಿನಲ್ಲಿಯೂ ದೇಗುಲಗಳಿದ್ದು, ದೇವರೇ ಗ್ರಾಮದ ರಕ್ಷಕನಾಗಿದ್ದಾನೆ. ಮಂಡ್ಯ ಜಿಲ್ಲೆಗೆ ಗ್ರಾಮ ಸೇರುವ ಮುನ್ನ ಹೋಬಳಿಯಾದ ಹೊಳೆನರಸೀಪುರಕ್ಕೆ ಸೇರಿತ್ತು. ಜಿಲ್ಲೆ ವಿಂಗಡಣೆಯಾದ ನಂತರ ಮಂಡ್ಯ ಜಿಲ್ಲೆಗೆ ಸೇರಲ್ಪಟ್ಟಿದೆ.

ಗ್ರಾಮದ ಮಹಾಲಿಂಗೇಶ್ವರ ದೇವರ ಮಹಿಮೆ ಬಲು ಪ್ರಖರವಾಗಿದ್ದು, ದೇವರ ಹೆಸರಿನಲ್ಲಿ ಮಹಾಲಿಂಗು, ಮಹಾಲಿಂಗೇಶ್ವರ, ಮಹದೇವೇಗೌಡ, ಮಹದೇವಸ್ವಾಮಿ, ಮಹದೇವಶಾಸ್ತ್ರಿ, ಮಹಾದೇವಮ್ಮ, ಮಹಾಲಿಂಗಮ್ಮ, ಮಾಲಿಂಗಮ್ಮ ಎನ್ನುವ ಹೆಸರಿನವರು ಅಧಿಕವಾಗಿರುವುದು ದೇವರ, ದೇಗುಲದ ಶಕ್ತಿಗೆ ಕಾರಣವಾಗಿದೆ.

ದೇಗುಲ ಸುಮಾರು 4 ಅಡಿ ಎತ್ತರದ ಕಲ್ಲಿನ ಸುಂದರ ತಳಪಾಯದ ಮೇಲೆ ಕಟ್ಟಲ್ಪಟ್ಟಿದೆ. ಮೈಸೂರು ಸಂಸ್ಥಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಪತ್ನಿ ಮಹಾರಾಣಿ ದೇವಿರಮ್ಮಣ್ಣಿ ಈ ಗ್ರಾಮದ ಮಗಳಾಗಿದ್ದು, ಈಕೆ ಕೆಂಕೇರಮ್ಮ ಹಾಗೂ ಮಹಾಲಿಂಗೇಶ್ವರ ದೇಗುಲ ಹಾಗೂ ತಾಲೂಕಿನಲ್ಲಿಯೇ ಪ್ರಥಮವಾಗಿ ಗ್ರಾಮದಲ್ಲಿ ಮಕ್ಕಳ ಅನುಕೂಲಕ್ಕಾಗಿ ಪ್ರಾಥಮಿಕ ಶಾಲೆ ನಿರ್ಮಿಸಲು ಮೂಲ ಕಾರಣರಾಗಿದ್ದಾರೆ. ದೇಗುಲ ಮಾಹಿತಿಗೆ ಸಂಶೋಧನೆಯಾಗಬೇಕಿದೆ.

ಕೃಷ್ಣಶಿಲೆಯಲ್ಲಿ ಪಾಣಿಪೀಠದ ಮೇಲೆ ಸುಮಾರು ಒಂದು ಅಡಿ ಎತ್ತರವಿರುವ ಮಹಾಲಿಂಗೇಶ್ವರ ನೋಡಲು ಮೋಹಕವಾಗಿದೆ. ದೇಗುಲದ ಒಳಗಡೆ ಸಪ್ತಮಾತೃಕೆ, ಗಣಪತಿ, ನಂದಿ, ವೇಣುಗೋಪಾಲಸ್ವಾಮಿ, ವೀರಭದ್ರೇಶ್ವರ ವಿಗ್ರಹವಿದೆ. ದೇಗುಲವನ್ನು ದಕ್ಷಿಣ ಮುಖಬಾಗಿಲಿನಿಂದ ಆರಂಭಿಸಿ ಉತ್ತರಾಭಿಮುಖವಾಗಿ ಮುಗಿಸಿದ ಕಾರಣ, ನಿರ್ಮಿಸಿದವರು ಉತ್ತರ ಬಾಗಿಲಿನಿಂದ ಹೊರ ನಡೆದರು ಎನ್ನುವುದು ಹಿರಿಯರ ನುಡಿಯಾಗಿದೆ. ದೇಗುಲದ ಪೂರ್ವ ಗೋಡೆಯಲ್ಲಿ ಬೆಳಕಿನ ಕಿರಣ ಪ್ರವೇಶಿಸುವಂತೆ ಜಾಲಾಂಧ್ರವಿದೆ. ಹಿಂದೆ ಸಂಕ್ರಾಂತಿ ವೇಳೆ ಸೂರ್ಯನ ಹೊಂಗಿರಣ ಈ ಜಾಲಾಂಧ್ರದಿಂದ ಲಿಂಗಕ್ಕೆ ಸ್ಪರ್ಶಿಸುತ್ತಿತ್ತು. ಒತ್ತುವರಿದಾರರ ತೆಂಗಿನ ತೋಟದಿಂದ ಸೂರ್ಯನ ಕಿರಣದ ದೇಗುಲ ಪ್ರವೇಶಕ್ಕೆ ತಡೆಯಾಗಿದೆ.

ದೇಗುಲದ ಮುಂದೆ ರಾಣಿ ದೇವಿರಮ್ಮಣ್ಣಿ ಅವರಿಂದ ಕಲ್ಯಾಣಿ ನಿರ್ಮಾಣವಾಗಿದ್ದು, ಸದ್ಯ ಕಲ್ಯಾಣಿ ಮುಚ್ಚಿಹೋಗಿದೆ. ಮಹಾರಾಣಿ ನೆನಪಿನ ಸುಂದರ ದೇಗುಲ ಉಳಿವಿಗಾಗಿ ಒತ್ತುವರಿ ತೆರವಿಗೆ, ಕಲ್ಯಾಣಿಗೆ ಮರುಜೀವ ಸಿಗಬೇಕಿದೆ. ದೇಗುಲ ಮುಜರಾಯಿಗೆ ಸೇರಿಸುವ ಯತ್ನ ಜರೂರು ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net