

ಮಹಾಲಿಂಗಪುರ: ಸ್ಥಳೀಯ ಜದ್ಗುರು ಮಹಾಲಿಂಗೇಶ್ವರ ಗೋಶಾಲೆಯಲ್ಲಿ ಚೊಚ್ಚಲ ಗರ್ಭ ಧರಿಸಿರುವ ಎರಡು ಗೋವುಗಳಿಗೆ ಶುಕ್ರವಾರ ಪೀಠಾಧಿಪತಿ ರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಸೀಮಂತ ಕಾರ್ಯ ನೆರವೇರಿಸಲಾಯಿತು.
ಗೋವುಗಳಿಗೆ ಹೂಗಳಿಂದ ಅಲಂಕರಿಸಿ, ಸೀರೆಯುಡಿಸಿ, ಬಳೆ ತೊಡಿಸಿ, ದಂಡೆ ಕಟ್ಟಿ, ಉಡಿ ತುಂಬಿ ಭಾರತೀಯ ಸನಾತನ ಸಂಸ್ಕೃತಿಯಂತೆ ಸೋಬಾನೆ ಹಾಡಿ, ಮಹಾಮಂಗಳಾರತಿ ಮಾಡಲಾಯಿತು.
ಜನರಲ್ಲಿ ಗೋವಿನ ಮಹತ್ವ ಮತ್ತು ಭಕ್ತಿಯ ಜತೆ ರಕ್ಷಣೆಯ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಠದ ಹೋರಿ ಮಹಾಲಿಂಗನಿಗೆ ಹೂವು, ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಗೋಶಾಲೆ ಸೇವಕರು ಮತ್ತು ಸದ್ಭಕ್ತರು ಕೋವಿಡ್-19 ನಿಯಮ ಪಾಲಿಸಿ ಪಾಲ್ಗೊಂಡಿದ್ದರು.