ಶಾಸಕ ಸವದಿ ನಡೆ ಖಂಡನೀಯ

Najayanamath
Published on

ಮಹಾಲಿಂಗಪುರ: ಮಹಾಲಿಂಗಪುರ ಪುರಸಭೆ ಆವರಣದಲ್ಲಿ ಅಧ್ಯಕ್ಷರ ಆಯ್ಕೆ ವೇಳೆ ನಡೆದ ಘಟನೆ ಶಾಸಕ ಸಿದ್ದು ಸವದಿ ನೇತೃತ್ವದ ಕಲ್ಪನಾತೀತ ಅಮಾನವೀಯ ಕೃತ್ಯ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನ 10 ಸದಸ್ಯರ ಜತೆ ಒಬ್ಬ ವೀಕ್ಷಕರನ್ನು ನಾವು ಕಳಿಸಿದ್ದೆವು. ಬಿಜೆಪಿ ಮೂವರು ಮಹಿಳಾ ಸದಸ್ಯರು ನಮ್ಮ ಬೆಂಬಲ ಯಾಚಿಸಿ ಬಂದಾಗ ಅದಕ್ಕಾಗಿ ನಾವು ಸಿದ್ದವಿದ್ದೆವು. ಶಾಸಕ ಸಿದ್ದು ಸವದಿ ಅವರು 3 ಬಾರಿ ಶಾಸಕರಾಗಿದ್ದು ಹಿರಿಯರಾಗಿ ಈ ರೀತಿ ಗುಂಡಾಗಿರಿ ಮಾಡುವುದು ಸರಿಯಲ್ಲ. ಅಧಿಕಾರಕ್ಕಾಗಿ ಈ ಮಟ್ಟಕ್ಕೆ ಹೋಗಿದ್ದು ಇಡಿ ಶಾಸಕ ಸಮೂಹವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಪೊಲೀಸರು ಕೂಡ ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ಬೃಹತ್ ಪ್ರತಿಭಟನೆ ಮಾಡುವ ಬಗ್ಗೆ ಸಮಾಲೋಚಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ ಮಾತನಾಡಿದರು. ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಜಿಲ್ಲಾ ಮಾಜಿ ಉಪಾಧ್ಯಕ್ಷ ಡಾ.ಎ.ಆರ್. ಬೆಳಗಲಿ, ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ, ಎಸ್.ಎಂ. ಉಳ್ಳೇಗಡ್ಡಿ, ಮಲ್ಲನಗೌಡ ಪಾಟೀಲ, ಬಸಪ್ಪ ಬುರುಡ, ಮಲ್ಲಪ್ಪ ಭಾವಿಕಟ್ಟಿ, ವಿನೋದ ಸಿಂಪಿ, ಹೊಳೆಬಸು ಕರೆಹೊನ್ನ, ಅರವಿಂದ ಮಾಲಬಸರಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net