

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ರನ್ನ ಹೈಟೆಕ್ ಗ್ರಂಥಾಲಯವನ್ನು ಸ್ಥಾಪಿಸಲು ಕೋರಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರಿಗೆ ಮನವಿ ಸಲ್ಲಿಸಲಾಯಿತು.
ರನ್ನಬೆಳಗಲಿ ಪಟ್ಟಣವು ಕಲೆ, ಸಾಹಿತ್ಯ, ನಾಟಕ ರಂಗಕ್ಕೆ ತನ್ನದೇ ಆದ ಐತಿಹಾಸಿಕ ಪರಂಪರೆಯನ್ನು ನೀಡಿ ಶ್ರೀಮಂತಗೊಳಿಸಿದೆ. ಆದರೆ, ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ಇಲ್ಲದಿರುವುದು ಶೋಚನೀಯ.
ಹಳೆಯ ಗ್ರಂಥಾಲಯ ಸಂಪೂರ್ಣ ಶಿಥಿಲಗೊಂಡಿದ್ದು, ಅಲ್ಲಿ ಸಾವಿರಾರು ಗ್ರಂಥಗಳು ನಾಶವಾಗುವುದನ್ನು ತಡೆಯಲು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೊಬ್ಬರ ಗೋದಾಮಿನಲ್ಲಿ ತಾತ್ಕಾಲಿಕವಾಗಿ ಸಂರಕ್ಷಣೆ ಮಾಡಲಾಗಿದೆ. ಶಿಕ್ಷಣ ಕ್ರಾಂತಿಗೆ ಪ್ರಮುಖ ಅಸ್ತ್ರವೇ ಗ್ರಂಥಾಲಯ. ಸ್ಥಳೀಯ ಯುವಕರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಈ ಗ್ರಂಥಾಲಯ ಅತ್ಯಾವಶ್ಯಕವಾಗಿದೆ. ಆದಕಾರಣ ಪಟ್ಟಣದಲ್ಲಿ ಹೈಟೆಕ್ ಗ್ರಂಥಾಲಯ ಸ್ಥಾಪನೆಗೆ ಕವಿ ಚಕ್ರವರ್ತಿ ರನ್ನ ಗ್ರಾಮೀಣಾಭಿವೃದ್ಧಿ ಸಂಘಟನೆ ಹಾಗೂ ಊರಿನ ಪರವಾಗಿ ಮನವಿ ಸಲ್ಲಿಸಲಾಯಿತು.
ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಉಪಾಧ್ಯಕ್ಷ ಪಂಡಿತ ಪೂಜಾರಿ, ಅಶೋಕ ಸಿದ್ದಾಪುರ, ಪವೀಣ ಭರಮನಿ, ರಾಘವೇಂದ್ರ ನೀಲನ್ನವರ, ಮಹಾದೇವ ಮುರನಾಳ, ಈರಪ್ಪ ಕಿತ್ತೂರ, ಮಲ್ಲು ಕ್ವಾನ್ಯಾಗೋಳ, ಪುಟ್ಟು ಕುಲಕರ್ಣಿ ಇತರರು ಇದ್ದರು.