

ಮಹಾಲಿಂಗಪುರ: ಕೆಎಚ್‌ಡಿಸಿ ನಿಗಮದ 108 ಕೋಟಿ ರೂ. ಸಾಲವನ್ನು ಸರ್ಕಾರವೇ ಭರಿಸಬೇಕು ಎಂದು ನೇಕಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಲಿಂಗ ಟಿರ್ಕಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಬುಧವಾರ ಪುರಸಭೆ ಮ್ಯಾನೇಜರ್ ರಾಘು ನಡುವಿನಮನಿ ಅವರಿಗೆ ಸಲ್ಲಿಸಿದರು.
ನಂತರ ಮಾತನಾಡಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಈ ಮೊದಲು 46 ಸಾವಿರ ಕುಟುಂಬಗಳು ರಾಜ್ಯಾದ್ಯಂತ ನೇಕಾರಿಕೆ ಮಾಡಿಕೊಂಡಿದ್ದವು. ಆದರೆ, ಈಗ ಕೇವಲ 5-6 ಸಾವಿರ ಕುಟುಂಬಗಳು ಮಾತ್ರ ನಿಗಮದಡಿಯಲ್ಲಿ ನೇಕಾರಿಕೆ ಮಾಡುತ್ತಿವೆ. ಇತ್ತೀಚೆಗೆ ನಿಗಮದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಾಸಕ ಸಿದ್ದು ಸವದಿ ಅವರು ನಿಗಮದ 108 ಕೋಟಿ ರೂ. ಸಾಲ ಮತ್ತು ಬಡ್ಡಿಯನ್ನು ಸರಿದೂಗಿಸಲು ನಿಗಮದ ಆಸ್ತಿಯನ್ನು ಮಾರಾಟ ಮಾಡುವುದಾಗಿ ಚಿಂತನೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ ಎಂದು ಆರೋಪಿಸಿದರು.
ಮತಕ್ಷೇತ್ರದ ಜೆ.ಡಿ.ಎಸ್. ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ ಮಾತನಾಡಿ, ರಾಜ್ಯ ಮತ್ತು ಕೇಂದ್ರಗಳಲ್ಲಿ ನಿಮ್ಮದೇ ಸರ್ಕಾರ ಇರುವುದರಿಂದ ಕೆ.ಎಚ್.ಡಿ.ಸಿ. ನಿಗಮದ ಸಾಲವನ್ನು ಶಾಸಕರೇ ಸರ್ಕಾರದಿಂದ ಮನ್ನಾ ಮಾಡಿಸಬೇಕು. ಹೆಚ್ಚಿನ ಅನುದಾನ ತಂದು ನಿಗಮವನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.