

ಮಹಾಲಿಂಗಪುರ: ಕಾರ್ಮಿಕರ ನಕಲಿ ಕಾರ್ಡ್‌ಗಳ ಹಾವಳಿ ಹೆಚ್ಚಾಗಿದ್ದು ಅರ್ಹ ಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸ್ಥಳೀಯ ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಕಾರ್ಮಿಕ ಇಲಾಖೆ ಬಾಗಲಕೋಟೆ ಜಿಲ್ಲಾ ಕಚೇರಿ ಕಾರ್ಯ ನಿರ್ವಾಹಕ ಅಧಿಕಾರಿ ಗುರುನಾಥ ಉಪ್ಪಾರ ಮೂಲಕ ಕಾರ್ಮಿಕ ಉಪ ಆಯುಕ್ತರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅರ್ಜುನ ಬಂಡಿವಡ್ಡರ ಮಾತನಾಡಿ, ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಘೋಷಿಸಿದ ಸೌಲಭ್ಯಗಳು ಸಕಾಲಕ್ಕೆ ಹಾಗೂ ಸಮರ್ಪಕವಾಗಿ ತಲುಪದೆ ಗೊಂದಲ ಸೃಷ್ಟಿಯಾಗಿದೆ. ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕ ಮಂಡಳಿ ಘೋಷಿಸಿದ್ದ ತಲಾ 5 ಸಾವಿರ ರೂ. ಸಹಾಯಧನ ಅರ್ಧಕ್ಕಿಂತ ಹೆಚ್ಚು ಲಾನುಭವಿಗಳಿಗೆ ಇನ್ನೂ ತಲುಪಿಲ್ಲ, ಹಲವರಿಗೆ ಅರ್ಧ ತಲುಪಿದರೆ ಕೆಲವರಿಗೆ ಜಾಸ್ತಿ ಜಮಾ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ 2017-18, 2018-19 ಮತ್ತು 2019-20 ರವರೆಗೆ ಕಾರ್ಮಿಕರಿಗೆ ಬರಬೇಕಾದ ಮದುವೆ ಸಹಾಯ ಧನವೂ ಬಂದಿಲ್ಲ. 2017-18, 2018-19, 2019-20ನೇ ಸಾಲಿನ ಶಿಷ್ಯವೇತನ ಕೂಡ ಕಾರ್ಮಿಕ ಮಕ್ಕಳಿಗೆ ಸರಿಯಾಗಿ ಸಿಕ್ಕಿಲ್ಲ. ನಕಲಿ ಲಾನುಭವಿಗಳಿಂದ ಸಹಾಯಧನ ಮರು ವಸೂಲಿ ಮಾಡಿ ಅರ್ಹರಿಗೆ ಬಳಸುವಂತಾಗಬೇಕು ಎಂದು ಆಗ್ರಹಿಸಿದರು.
ಕಾರ್ಯದರ್ಶಿ ತಿಪ್ಪಣ್ಣ ಬಂಡಿವಡ್ಡರ, ಸದಸ್ಯರಾದ ಬಸವರಾಜ ಪಾತ್ರೋಟ, ಕುಮಾರ ಪಾತ್ರೋಟ, ಶ್ರೀಶೈಲ ಗಣಾಚಾರಿ, ಬಸವರಾಜ ಗಾಡೆಕರ, ಕೃಷ್ಣಪ್ಪ ವಡ್ಡರ, ರಂಗಪ್ಪ ವಡ್ಡರ ಇತರರು ಇದ್ದರು.