

ಮಹಾಲಿಂಗಪುರ: ಸ್ಥಳೀಯ ಪುರಸಭೆಗೆ ಶುಕ್ರವಾರ ನಡೆದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪುರಸಭೆ ಅಧ್ಯಕ್ಷರಾಗಿ ಯಲ್ಲನಗೌಡ ಪಾಟೀಲ ಉಪಾಧ್ಯಕ್ಷರಾಗಿ ಶೀಲಾ ಭಾವಿಕಟ್ಟಿ ಅವಿರೋಧ ಆಯ್ಕೆಯಾಗಿದ್ದು, ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ.
ನಾಮಸಪತ್ರ ಸಲ್ಲಿಸುವ ಕೊನೇ ವೇಳೆಯವರೆಗೂ ಕೇವಲ ಇವರಿಬ್ಬರ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದಾಗಿ ಅವರನ್ನೇ ಅವಿರೋಧ ಆಯ್ಕೆ ಮಾಡಲಾಯಿತೆಂದು ಚುನಾವಣಾಧಿಕಾರಿ ಗಿರೀಶ ಸ್ವಾದಿ ತಿಳಿಸಿದರು. ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಸದಸ್ಯರಾದ ಬಲವಂತಗೌಡ ಪಾಟೀಲ, ಭಾವನಾ ಪಾಟೀಲ, ಮುಸ್ತಾಕ ಚಿಕ್ಕೋಡಿ, ಅಬ್ದುಲ್‌ರಜಾಕ ಬಾಗವಾನ, ರಾಜು ಗೌಡಪ್ಪಗೋಳ, ಬಸವರಾಜ ಬುರುಡ, ಪಕ್ಷೇತರ ಸದಸ್ಯ ಸಜನಸಾಬ ಪೆಂಡಾರಿ, ಬಿಜೆಪಿ ಬಂಡಾಯ ಸದಸ್ಯೆಯರಾದ ಸವಿತಾ ಹುರಕಡ್ಲಿ, ಗೋದಾವರಿ ಬಾಟ, ಚಾಂದನಿ ನಾಯಕ ಇತರರಿದ್ದರು.
ಮೆರವಣಿಗೆ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಂತರ ಹರ್ಷಗೊಂಡ ಕಾಂಗ್ರೆಸ್ ಕಾರ್ಯಕರ್ತರು ಗುಲಾಲ ಎರಚಿ, ಪಟಾಕ್ಷಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರಲ್ಲದೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಸಿದರು.
23 ಸದಸ್ಯ ಬಲದ ಪುರಸಭೆಗೆ ಬಿಜೆಪಿಯ ಚುನಾಯಿತ 13 ಸದಸ್ಯರು ಇದ್ದರು. ಶಾಸಕರು ಮತ್ತು ಸಂಸದರು ಸೇರಿ ಒಟ್ಟು 15 ಮತಗಳ ಸರಳ ಬಹುಮತ ಇತ್ತು. ಆದರೆ, ಸದಸ್ಯರಲ್ಲಿ ಭಿನ್ನಾಭಿಪ್ರಾಯದ ಕಾರಣ ಈ ಹಿಂದೆಯೇ ಮೂವರು ಬಿಜೆಪಿ ಸದಸ್ಯರು ಬಂಡಾಯ ಎದ್ದು ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ 23 ಸದಸ್ಯರಲ್ಲಿ ಕಾಂಗ್ರೆಸ್‌ಗೆ 12 ಸದಸ್ಯರ ಬೆಂಬಲವಿದ್ದರೆ ಬಿಜೆಪಿಗೂ 12 ಮತಗಳು ಇದ್ದವು. ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿ ಈ ಬಾರಿ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದನ್ನು ಗಮನಿಸಿದ ಬಿಜೆಪಿ ತಮಗೆ ಬಹುಮತ ಸಿಗದೆಂದು ಖಾತ್ರಿಪಡಿಸಿಕೊಂಡು ಚುನಾವಣೆ ಗೋಜಿಗೆ ಹೋಗಲಿಲ್ಲ. ಈ ಮುಂಚಿನ ಚುನಾವಣೆಯಲ್ಲಿ ಗಲಾಟೆ-ನೂಕಾಟ-ತಳ್ಳಾಟ ಆಗಿದ್ದರಿಂದ ಬೇಸರಗೊಂಡಿದ್ದ ಬಿಜೆಪಿ ಮುಖಂಡರು ಶಾಂತಿ ಮಂತ್ರ ಪಠಿಸುತ್ತ ಮೌನವಾಗುಳಿದರು. ಈ ಮೂಲಕ ಪ್ರಶ್ನಾತೀತ ಕಾಂಗ್ರೆಸ್ ನಾಯಕ ಯಲ್ಲನಗೌಡ ಪಾಟೀಲ ಅವರಿಗೆ ದಾರಿ ಸುಗಮವಾಯಿತು.
ಭಾರಿ ಬಂದೋಬಸ್ತ್ತ್: ಚುನಾವಣೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಾಲ್ಕು ದಿಕ್ಕಿಗೆ ಕಟ್ಟಡಗಳ ಮೇಲೆ ಪೊಲೀಸ್ ಸಿಬ್ಬಂದಿ ಶಸ ಸಮೇತ ಕಾವಲಿದ್ದರಲ್ಲದೆ, ಪುರಸಭೆ ಬಳಿ ಚುನಾವಣೆಗೆ ಸಂಬಂಧಿಸಿದವರನ್ನು ಹೊರತುಪಡಿಸಿ ಇರುವೆಯೂ ನುಸುಳದಂತೆ ಭಾರೀ ಬಂದೋಬಸ್ ಮಾಡಿದ್ದರು.