ಎರಡು ವಾರ ಸ್ವಯಂಪ್ರೇರಿತ ಲಾಕ್‌ಡೌನ್

MLP 61
Published on

ಮಹಾಲಿಂಗಪುರ: ಕೋವಿಡ್ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ಪ್ರತಿದಿನ ಮಧ್ಯಾಹ್ನ 12 ರಿಂದ ಮುಂದಿನ ಎರಡು ವಾರ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ, ಠಾಣಾಧಿಕಾರಿ ಆನಂದ ಆದಗೊಂಡ, ಸಮುದಾಯ ಆರೋಗ್ಯ ಕೇಂದ್ರದ ಎಂ.ಬಿ. ಗೋಣಿ ನೇತೃತ್ವದಲ್ಲಿ ಬುಧವಾರ ಪುರಸಭೆ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಲಾಕ್‌ಡೌನ್ ನಿರ್ಧಾರ ಮಾಡಲಾಯಿತು.

ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ, ಠಾಣಾಧಿಕಾರಿ ಆನಂದ ಆದಗೊಂಡ ಮಾತನಾಡಿ, ಮಧ್ಯಾಹ್ನ 12 ಗಂಟೆ ನಂತರ ಅನವಶ್ಯಕವಾಗಿ ಸಂಚರಿಸುವ ಪ್ರತಿಯೊಂದು ಬೈಕ್‌ಗಳನ್ನು ಸೀಜ್ ಮಾಡಲಾಗುವುದು. ಪುರಸಭೆ 23 ಸದಸ್ಯರು ಸಹ ತಮ್ಮ ವಾರ್ಡ್‌ನ ಜನರಲ್ಲಿ ಜಾಗೃತಿ ಮೂಡಿಸಿ ಕೋವಿಡ್ ನಿಯಂತ್ರಣಕ್ಕಾಗಿ ಸಹಕಾರ ನೀಡಬೇಕು ಎಂದರು.

ಸರ್ಕಾರಿ ಆಸ್ಪತ್ರೆಯ ಎಂ.ಬಿ. ಗೋಣಿ ಮಾತನಾಡಿ, ಪಟ್ಟಣದ ಎಲ್ಲ ಮೆಡಿಕಲ್ ಅಂಗಡಿಯವರು ಸರ್ಕಾರಿ ಆಸ್ಪತ್ರೆಯಿಂದ ವಿತರಿಸಲಾಗುತ್ತಿರುವ ಮಾತ್ರೆಗಳ ಕಿಟ್ ಮಾದರಿಯಲ್ಲೇ ಕಿಟ್ ತಯಾರಿಸಿ ಮಾತ್ರೆಗಳನ್ನು ತೆಗದುಕೊಳ್ಳುವ ಮಾಹಿತಿ ಚೀಟಿಯೊಂದಿಗೆ ಸಾರ್ವಜನಿಕರಿಗೆ ವಿತರಿಸಬೇಕು. ಮಾತ್ರೆಯ ಕಿಟ್ ವಿತರಿಸಿದ ವ್ಯಕ್ತಿಯ ವಿಳಾಸ ದಾಖಲಿಸಿಕೊಂಡು ಪುರಸಭೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ತಲುಪಿಸಿದರೆ ಪ್ರಾರಂಭಿಕ ಹಂತದಲ್ಲೇ ಕರೊನಾ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ ಎಂದರು.

ನೂತನ ನಿಯಮಗಳು
ಬೆಳಗ್ಗೆ 6 ರಿಂದ 10 ಗಂಟೆವರೆಗೆ ತಳ್ಳುಗಾಡಿ ಮೂಲಕ ಮನೆ ಮನೆಗೆ ತರಕಾರಿ ಮಾರಾಟಕ್ಕೆ ಅವಕಾಶವಿದ್ದು ಪಟ್ಟಣದ ಯಾವುದೇ ಮುಖ್ಯರಸ್ತೆಗಳಲ್ಲಿ ತಳ್ಳುಗಾಡಿ ನಿಲ್ಲಿಸುವಂತಿಲ್ಲ. ಬೆಳಗ್ಗೆ 10 ಗಂಟೆವರೆಗೆ ಕಿರಾಣಿ ಮತ್ತು ದಿನಸಿ ವ್ಯಾಪಾರಸ್ಥರು ಹೋಮ್ ಡೆಲಿವರಿ ಮತ್ತು ಹೋಲ್‌ಸೆಲ್ ಮಾರಾಟ ಮಾಡಬಹುದು. ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಬೇಕು. ಸಲೂನ್, ಟೀ ಪಾಯಿಂಟ್ ಸೇರಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net