

ಮಹಾಲಿಂಗಪುರ: ಜನಗಣತಿ ಪ್ರಾರಂಭ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡಿ.31 ರೊಳಗೆ ಹೊಸ ಜಿಲ್ಲೆ ಹಾಗೂ ತಾಲೂಕು ರಚನೆಗೆ ರಾಜ್ಯಗಳಿಗೆ ಗಡುವು ನೀಡಿದೆ. ಆದ್ದರಿಂದ ಈಗ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮಹಾಲಿಂಗಪುರ ತಾಲೂಕು ರಚನೆ ಮಾಡಿಕೊಳ್ಳಲು ಸುವರ್ಣಾವಕಾಶ ಇದಾಗಿದೆ ಎಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹಾಗೂ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು.
ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ತಾಲೂಕು ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರನ್ನು ಸಂಪರ್ಕಿಸಿ ಅವರ ಮೂಲಕ ನಮ್ಮ ತಾಲೂಕು ರಚನೆ ಕನಸು ಸಾಕಾರಗೊಳಿಸೋಣ ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, 1182ನೇ ದಿನಕ್ಕೆ ಕಾಲಿಟ್ಟ ನಮ್ಮ ಹೋರಾಟದ ಮೊದಲನೇ ಹಂತ ಮುಗಿದಿದೆ. ನಿರ್ಣಯ ಸರ್ಕಾರದ ಹಂತದಲ್ಲಿದೆ. ತಾಲೂಕು ಘೋಷಿಸಲು ಸರ್ಕಾರಕ್ಕೂ ಇದು ಸಕಾಲವಾಗಿದೆ. ಅದಕ್ಕಾಗಿ ಉಸ್ತುವಾರಿ ಸಚಿವರ ಮುಖಾಂತರ ಕಂದಾಯ ಸಚಿವ ಮತ್ತು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಬೇಕು. ಉಪವಾಸ, ಸತ್ಯಾಗ್ರಹದಂತಹ ಸಾಮೋಪಾಯ ಕೆಲಸ ಮಾಡುತ್ತಿಲ್ಲ. ಗಟ್ಟಿಯಾಗಿ ನಿಲ್ಲೋಣ ಎಂದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲಿಕರ, ಸೈದಾಪುರ-ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಗೌಡ ಪಾಟೀಲ ಮಾತನಾಡಿ, ತಾಲೂಕು ರಚನೆ ಕುರಿತ ನಮ್ಮ ಫೈಲ್ ಕಂದಾಯ ಇಲಾಖೆಗೆ ರವಾನೆಯಾಗಿದ್ದರಿಂದ ಅದು ಅಲ್ಲಿಂದ ಜಿಲ್ಲಾ ಹಾಗೂ ತಾಲೂಕು ವಿಂಗಡಣೆ ಕಮಿಟಿ ಮುಂದೆ ಹೋಗಬೇಕು ಎಂದರು.
ತಾಲೂಕು ಹೋರಾಟ ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಜು.14 ರಂದು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ತಾಲೂಕು ಹೋರಾಟಗಾರರಾದ ವೀರೇಶ ಆಸಂಗಿ, ಮಹಾದೇವ ಮಾರಾಪುರ, ಶಿವಲಿಂಗ ಟಿರಕಿ, ನಿಂಗಪ್ಪ ಬಾಳಿಕಾಯಿ, ಸಿದ್ದು ಶಿರೋಳ, ಶಿವನಗೌಡ ಪಾಟೀಲ, ಎಸ್.ಎಂ. ಪಾಟೀಲ, ಬಂದು ಪಕಾಲಿ, ಈಶ್ವರ ಮುರಗೋಡ ಮಾತನಾಡಿದರು.
ಹೋರಾಟ ಸಮಿತಿಯ ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪ್ಪ ಸನದಿ, ಚನ್ನಪ್ಪ ಪಟ್ಟಣಶೆಟ್ಟಿ, ದುಂಡಪ್ಪ ಜಾಧವ, ವಿಠ್ಠಲ ಸಂಶಿ, ಮಹಮ್ಮದ ಹೂಲಿಕಟ್ಟಿ, ವಿಠ್ಠಲ ಢವಳೇಶ್ವರ, ಮಹಾಲಿಂಗಪ್ಪ ಜಕ್ಕನ್ನವರ, ಸಲೀಮ ಕರೋಶಿ, ಅರವಿಂದ ಮಾಲಬಸರಿ, ಹನುಮಂತ ಜಮಾದಾರ, ರಫೀಕ್ ಮಾಲದಾರ, ಆನಂದ ಬಂಡಿ, ಜ್ಯೋತೆಪ್ಪ ಕಪರಟ್ಟಿ, ರಾಜು ತೇರದಾಳ, ಶಿವಕುಮಾರ ಕೊಟಬಾಗಿ ಇದ್ದರು.
ತಾಲೂಕು ಹೋರಾಟ ಸಭೆಗೆ ಪುರಸಭೆ ಸದಸ್ಯರಿಗೆ ಆಹ್ವಾನ ನೀಡಿದರೂ ಅವರು ಗೈರಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೋರಾಟಗಾರ ವೀರೇಶ ಆಸಂಗಿ, ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಜನಪ್ರತಿನಿಧಿಗಳಿಗೆ ಪಟ್ಟಣದ ಅಭಿವೃದ್ಧಿ ಕುರಿತು ಆಸಕ್ತಿ ಇರಬೇಕು. ಆಸಕ್ತಿ ಇರದಿದ್ದರೆ ರಾಜಕೀಯ ಕ್ಷೇತ್ರಕ್ಕೆ ಬರಬಾರದಿತ್ತು ಎಂದು ಹರಿಹಾಯ್ದರು.