ಜೀವನದಲ್ಲಿರಲಿ ಸ್ಪಷ್ಟ ಗುರಿ

Mahalaxmi
Published on

ಮಕ್ಕಳಿಗೆ ಹರಿರಾಂ ಶಂಕರ್​ ಕಿವಿಮಾತು

ಮಹಾಲಕ್ಷ್ಮೀ ಬ್ಯಾಂಕ್​ನಿಂದ ಪ್ರತಿಭಾ ಪುರಸ್ಕಾರ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದೇಶಗಳಲ್ಲಿ ಉದ್ಯೋಗ ಮಾಡುವ ಕ್ರೇಜ್​ ಇತ್ತೀಚೆಗೆ ಕ್ಷೀಣಿಸುತ್ತಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ದೇಶದಲ್ಲಿಯೇ ಮುಂದೆ ಭವಿಷ್ಯ ಕಟ್ಟಿಕೊಳ್ಳಬೇಕಿದ್ದು, ಎದುರಾಗುವ ಸೋಲುಗಳನ್ನೆಲ್ಲ ಸಹಜವಾಗಿ ಸ್ವೀಕರಿಸಿ. ಜೀವನದಲ್ಲಿ ಏನಾಗಬೇಕೆಂಬ ಸ್ಪಷ್ಟವಾದ ಗುರಿ ಇರಲಿ. ಆ ಗುರಿ ತಲುಪುವವರೆಗೂ ವಿರಮಿಸಬೇಡಿ. ಯುದ್ಧದ ರೀತಿಯಲ್ಲಿ ಗೆಲುವು ಲಭಿಸುವ ಅಂತ್ಯದವರೆಗೂ ಸೆಣೆಸಾಡಿ. ಸೋತರೂ ಬಿಡಲ್ಲ ಎಂಬ ಹಠ ತಾಳಿ ಎಂದು ಮಕ್ಕಳಿಗೆ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಕಿವಿಮಾತು ಹೇಳಿದರು.

ಉಡುಪಿಯ ಪುರಭವನದಲ್ಲಿ ಮಹಾಲಕ್ಷ್ಮೀ ಕೋ-ಆಪರೇಟಿವ್​ ಬ್ಯಾಂಕ್​ ಉಡುಪಿ ವತಿಯಿಂದ ಶನಿವಾರ (ನ.8) ಆಯೋಜಿಸಿದ್ದ ಉಡುಪಿ ಜಿಲ್ಲೆಯ ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಸದಸ್ಯ ಹಾಗೂ ಸದಸ್ಯೇತರ 1,500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 25 ಲಕ್ಷ ರೂ. ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಹಿತವಚನ ನೀಡಿದರು.

ಶೈಕ್ಷಣಿಕ ಕ್ಷೇತ್ರಕ್ಕೆ ಪ್ರೋತ್ಸಾಹ

ಮಹಾಲಕ್ಷ್ಮೀ ಬ್ಯಾಂಕ್​ನ ಅಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ಮಾತಿನಂತೆ ಬ್ಯಾಂಕ್​ನ ಲಾಭಾಂಶದಲ್ಲಿ ಅಲ್ಪ ಮೊತ್ತವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸುತ್ತಿದ್ದೇವೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. 9 ವರ್ಷದಿಂದ ಜಿಲ್ಲೆಯ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತಿದೆ. ಐಎಎಸ್​, ಐಪಿಎಸ್​ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿದ್ದಲ್ಲಿ ಅವರ ಎಲ್ಲ ಶೈಕ್ಷಣಿಕ ವೆಚ್ಚವನ್ನು ಬ್ಯಾಂಕ್​ ವತಿಯಿಂದ ಭರಿಸಲಾಗುವುದು ಎಂದು ಭರವಸೆ ನೀಡಿದರು.

ಅಂಕ ಗಳಿಕೆ ಸಾಧನೆಯಲ್ಲ

ಕಾರ್ಯಕ್ರಮ ಉದ್ಘಾಟಿಸಿದ ಜಿ.ಶಂಕರ್​ ಫ್ಯಾಮಿಲಿ ಟ್ರಸ್ಟ್​ನ ಶ್ಯಾಮಿಲಿ ನವೀನ್​ ಮಾತನಾಡಿ, ಅಂಕ ಗಳಿಕೆಯೇ ಸಾಧನೆಯಲ್ಲ. ಸುಶಿಕ್ಷಿತರಾಗಿ ನಾವು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದು ಮುಖ್ಯ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಅನುಕೂಲವಾಗಲು ಕಿಂಚಿತ್​ ಸಹಾಯ ಮಾಡುತ್ತಿರುವ ಮಹಾಲಕ್ಷ್ಮೀ ಬ್ಯಾಂಕ್​ನ ಕಾರ್ಯ ಮಾದರಿ ಎಂದರು.

ಬ್ಯಾಂಕ್​ನ ಡೈರಿ ಬಿಡುಗಡೆ

ಗೀತಾನಂದ ಫೌಂಡೇಶನ್​ನ ಪ್ರವರ್ತಕ ಆನಂದ ಸಿ. ಕುಂದರ್​ ಮಹಾಲಕ್ಷ್ಮೀ ಬ್ಯಾಂಕ್​ನ 2026ನೇ ಸಾಲಿನ ಡೈರಿ ಬಿಡುಗಡೆಗೊಳಿಸಿದರು. ಯಶ್​ಪಾಲ್​ ಸುವರ್ಣ ಅಧ್ಯಕ್ಷತೆಯಲ್ಲಿ ಬ್ಯಾಂಕ್​ ವರ್ಷದಿಂದ ವರ್ಷಕ್ಕೆ ಲಾಭದಾಯಕದತ್ತ ಸಾಗುತ್ತ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಇಂತಹ ಪುರಸ್ಕಾರಗಳಿಂದ ಜೀವನ ನಿರ್ಮಿಸಿಕೊಂಡು ನಾಲ್ಕಾರು ಮಂದಿಗೆ ಕೆಲಸ ಕೊಡುವ ರೀತಿಯಲ್ಲಿ ಬೆಳೆಯಬೇಕು ಎಂದರು.

ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ. ಕೋಟ್ಯಾನ್​, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಜಿ. ಕರ್ಕೇರ, ರಾಮಚಂದ್ರ ಕುಂದರ್​, ನಾಗರಾಜ ಸವರ್ಣ, ವಾಸುದೇವ ಸಾಲಿಯಾನ್​, ಶರತ್​ ಕುಮಾರ್​ ಶೆಟ್ಟಿ, ಉದ್ಯಮಿಗಳಾದ ಆನಂದ್​ ಪಿ. ಸುವರ್ಣ, ಅಜಯ್​ ಪಿ. ಶೆಟ್ಟಿ ಉಪಸ್ಥಿತರಿದ್ದರು.

ಸೋಲನ್ನು ಎದುರಿಸಿಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರೀಯ ಮಟ್ಟದ ತರಬೇತುದಾರ ಕೆ.ರಾಜೇಂದ್ರ ಭಟ್​ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ವಿಚಾರ-ಘಟನೆಗಳ ಮಾಹಿತಿ ನೀಡಿ, ಎದುರಾಗುವ ಸೋಲು, ಅಪಮಾನಗಳಿಂದ ಒತ್ತಡಕ್ಕೆ ಸಿಲುಕಬೇಡಿ. ನಿಮ್ಮಲ್ಲಿರುವ ಆತ್ಮಶಕ್ತಿಯ ವರ್ಧನೆಯಿಂದ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ಸಾಧನೆ ಮಾಡಬೇಕು ಎಂದರು.

ಬ್ಯಾಂಕ್​ನ ಸಿಬ್ಬಂದಿ ಸರಿತಾ ಪ್ರಾರ್ಥಿಸಿದರು. ಸತೀಶ್​ ಶೆಟ್ಟಿ ಚಿತ್ರಪಾಡಿ ಹಾಗೂ ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಯಾವುದೇ ಕಲಿಕೆಗೆ ಬಡತನ ಅಡ್ಡಿಯಾಗದು ಎನ್ನುವುದಕ್ಕೆ ಅನೇಕರ ಸಾಧನೆ ಕಣ್ಮುಂದೆ ಇದೆ. ನಾಗರಿಕ ಸೇವೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದಿದ್ದಲ್ಲಿ ಐಎಎಸ್​, ಐಪಿಎಸ್​ ತರಬೇತಿ ಕೊಡಿಸಲು ನಾನೂ ಸಿದ್ಧನಿದ್ದೇನೆ. ತಾವುಗಳು ಸಣ್ಣ ಕನಸು ಕಾಣಬಾರದು. ವೈಯಕ್ತಿಕವಾಗಿ ಬೆಳೆದು ರಾಷ್ಟ್ರಕ್ಕೆ ಮಹತ್ತರ ಕೊಡುಗೆ ನೀಡುವ ದೊಡ್ಡ ಕನಸು ಕಾಣಬೇಕು. | ಹರಿರಾಂ ಶಂಕರ್​. ಉಡುಪಿ ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net