ಮಹಾಲಕ್ಷ್ಮೀ ದೇವಿ ಮಹಿಮೆ ಅಪಾರ

23manju5-Web
ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ಮಹಾಲಕ್ಷ್ಮೀ ದೇವಿ ಮಹಾತ್ಮೆ ಕುರಿತು ತಯಾರಿಸಿರುವ ‘ಜಾತ್ರಿ ಬಂತು’ ಕಿರುಚಿತ್ರ ಬಿಡುಗಡೆ ಸಮಾರಂಭವನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ಮಾಜಿ ಶಾಸಕ ಸಂಜಯ ಪಾಟೀಲ, ಡಾ. ಡಿ.ಎಸ್. ಚೌಗಲೆ, ದೇವಣ್ಣ ಬಂಗೆಣ್ಣವರ, ಧನಂಜಯ ಜಾಧವ, ನಾನಪ್ಪ ಪಾರ್ವತಿ, ಕಿರಣಸಿಂಗ್ ರಜಪೂತ ಇತರರು ಇದ್ದರು.
Published on

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಹಾಗೂ ಬೆಳಗಾವಿ ತಾಲೂಕಿನ ಸುಳೇಭಾವಿಯ ಮಹಾಲಕ್ಷ್ಮೀ ದೇವಿ ಮಧ್ಯೆ ಯಾವುದೇ ವ್ಯತ್ಯಾಸ ಇಲ್ಲ. ಉಭಯ ದೇವಿಯರ ಮಹಿಮೆ ಒಂದೇ ಆಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ಮಹಾಲಕ್ಷ್ಮೀ ದೇವಿ ಮಹಾತ್ಮೆ ಕುರಿತು ತಯಾರಿಸಿರುವ ‘ಜಾತ್ರಿ ಬಂತು’ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಭಾಗದಲ್ಲಿ ಅತ್ಯಂತ ಅದ್ದೂರಿಯಾಗಿ ಮಹಾಲಕ್ಷ್ಮೀ ದೇವಿ ಜಾತ್ರೆ ನಡೆಯುತ್ತಿದೆ. ಸುಕ್ಷೇತ್ರ ಸುಳೇಭಾವಿ ಮಹಾಲಕ್ಷ್ಮೀ ದೇವಿ ಮಹಾತ್ಮೆ ಕುರಿತು ನಿರ್ಮಾಣಗೊಂಡಿರುವ ಕಿರುಚಿತ್ರ ಮೂಲಕ ದೇವಿಯ ಮಹಿಮೆ ದೇಶಾದ್ಯಂತ ಪಸರಿಸಲಿ ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಹಲವು ದಶಕಗಳಿಂದ ಗ್ರಾಮದಲ್ಲಿ ಮಹಾಲಕ್ಷ್ಮೀದೇವಿ ಜಾತ್ರೆ ಅತ್ಯಂತ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ಬೇರೆ ಜಿಲ್ಲೆಗಳಿಂದ ಭಕ್ತರು ಬರುತ್ತಿದ್ದಾರೆ ಎಂದರು.

ನಾಟಕಕಾರ ಡಾ. ಡಿ.ಎಸ್. ಚೌಗಲೆ ಮಾತನಾಡಿ, ಸುಳೇಭಾವಿ ಗ್ರಾಮ ಪಂಡಿತ ಕುಮಾರ ಗಂಧರ್ವರು ಜನಿಸಿದ ನೆಲ. ಗಂಧರ್ವರು ಇಡೀ ಜಗತ್ತಿಗೆ ತಮ್ಮ ಗಾಯನದ ಮೂಲಕ ಸುಳೇಭಾವಿಯನ್ನು ಹೆಸರುವಾಸಿ ಮಾಡಿದ್ದಾರೆ. ‘ಜಾತ್ರಿ ಬಂತು’ ಕಿರುಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಇನ್ನೂ ಉತ್ತಮ ಚಿತ್ರಗಳನ್ನು ನಿರ್ಮಿಸುವಂತೆ ಸಲಹೆ ನೀಡಿದರು.

ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೆಣ್ಣವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಬಡಿಗೇರ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಧನಂಜಯ ಜಾಧವ, ಮುಖಂಡ ನಾನಪ್ಪ ಪಾರ್ವತಿ, ಕಿರಣಸಿಂಗ್ ರಜಪೂತ, ಶಿಕ್ಷಕ ಶಿವಪ್ಪ ಕೌತಗಾರ, ತಾಲೂಕು ಪಂಚಾಯಿತಿ ಸದಸ್ಯ ಬಸನಗೌಡ ಹುಂಕರೀಪಾಟೀಲ, ಭೈರೋಬಾ ಕಾಂಬಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net