

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2023&-28ನೇ ಸಾಲಿನ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಬ್ಯಾಂಕಿನ ಉಪಾಧ್ಯಕ್ಷರಾಗಿ ವಾಸುದೇವ ಸಾಲ್ಯಾನ್, ನಿರ್ದೇಶಕರಾಗಿ ಕೆ ಸಂಜೀವ ಶ್ರೀಯಾನ್, ವೆಂಕಟರಮಣ ಕಿದಿಯೂರು, ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ರಾಮ ನಾಯ್ಕ್ ಎಚ್, ಶಿವರಾಮ ಕುಂದರ್, ಸುರೇಶ ಬಿ ಕರ್ಕೇರ, ಸದಾನಂದ ಬಳ್ಕೂರು, ವನಜ ಕಿದಿಯೂರು, ವನಜ ಜೆ ಪುತ್ರನ್, ಮನೋಜ್ ಆಯ್ಕೆಯಾಗಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದು, 2022&-23 ನೇ ಸಾಲಿನಲ್ಲಿ ಬ್ಯಾಂಕ್ 9,464 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಕಳೆದ 14 ವರ್ಷಗಳಿಂದ ನಿರಂತರವಾಗಿ ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ನೀಡುವ ಕರಾವಳಿ ಕರ್ನಾಟಕದ ಏಕೈಕ ಪಟ್ಟಣ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2008 ರಿಂದ ಬ್ಯಾಂಕಿನ ನಿರ್ದೇಶಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿರುವ ಯಶ್ ಪಾಲ್ ಸುವರ್ಣ 2018ರಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಯಶ್ಪಾಲ್ ಅವರು 2014 ರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಹಲವಾರು ಸಹಕಾರಿ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯಶ್ ಪಾಲ್ ಸುವರ್ಣ ತಮ್ಮ ಸಹಕಾರ ಕ್ಷೇತ್ರದ ಸಾಧನೆಗಾಗಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ 2022 ನೇ ಸಾಲಿನ ಸಹಕಾರ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಸಹಕಾರ ರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಸ್ತುತ ಉಡುಪಿ ಶಾಸಕರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಮೀನುಗಾರಿಕೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.