

ಮಂಗಳೂರು: ದಕ್ಷಿಣ ರೈಲ್ವೆ ವ್ಯಾಪ್ತಿಯ ಮಂಗಳೂರು ಮಾರ್ಗನ್ ಗೇಟ್- ಜಪ್ಪಿನಮೊಗರು ಕ್ರಾಸ್ (ರಾಷ್ಟ್ರೀಯ ಹೆದ್ದಾರಿ 66) ಸಮೀಪ ಮಹಾಕಾಳಿಪಡ್ಪು ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅವಳಿ ಕೆಳ ಸೇತುವೆಗಳ (ಆರ್‌ಯುಬಿ) ಕಾಮಗಾರಿ 2025, ಜನವರಿಯಲ್ಲಿ ಪೂರ್ಣಗೊಳ್ಳಲಿದೆ.
ದಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜರುಗಿದ ತ್ರೈಮಾಸಿಕ ರೈಲ್ವೆ ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ದಕ್ಷಿಣ ರೈಲ್ವೆ ಅಧಿಕಾರಿಗಳು ಈ ಭರವಸೆ ನೀಡಿದರು.
ನಿರಂತರ ಸುರಿಯುತ್ತಿದ್ದ ಮಳೆಯಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆಳಸೇತುವೆಯ ಕೊನೆಯಯ ನಾಲ್ಕು ಬಾಕ್ಸ್‌ಗಳ ಕಾಮಗಾರಿ ಆರಂಭಿಸಲಾಗಿದೆ ಎಂದು ರೈಲ್ವೆ ಪಾಲಕ್ಕಾಡ್ ವಿಭಾಗದ ವಿಭಾಗೀಯ ಸಹಾಯಕ ರೈಲ್ವೆ ಪ್ರಬಂಧಕ ಅನಿಲ್ ಕುಮಾರ್ ಹೇಳಿದರು.
ಅವಳಿ ಕೆಳ ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಮಂಗಳೂರು ಸ್ಮಾರ್ಟ್ ಸಿಟಿ ಜತೆ ಸೇರಿ ಸಂಪರ್ಕ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಸದ ಕ್ಯಾ.ಚೌಟ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್ ಅವರಿಗೆ ಸೂಚಿಸಿದರು.
* ಪಾಂಡೇಶ್ವರ ಲೆವೆಲ್ ಕ್ರಾಸಿಂಗ್
ಪಾಂಡೇಶ್ವರ ಮತ್ತು ಬಂದರ್ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ಮುಚ್ಚುವ ಅವಧಿ ಕಡಿತಗೊಳಿಸಲಾಗಿದೆ. ಪಾಂಡೇಶ್ವರ (ಮಂಗಳಾ ದೇವಿ ರಸ್ತೆ) ಪ್ರತೀ ಬಾರಿ ಲೆವೆಲ್ ಕ್ರಾಸಿಂಗ್ ಗೇಟ್ ಪ್ರತೀ ಬಾರಿ ಮುಚ್ಚುವ ಅವಧಿ ಸುಮಾರು 9 ನಿಮಿಷಗಳಿಂದ 3.5 ನಿಮಿಷಗಳಿಗೆ ಇಳಿಸಲಾಗಿದೆ. ಬಂದರ್ ಲೆವೆಲ್ ಕ್ರಾಸಿಂಗ್ ಗೇಟ್ ಅನ್ನು ಕಳೆದ 31 ದಿನಗಳಲ್ಲಿ 47 ಬಾರಿ ಮಾತ್ರ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಆರ್ಥಿಕ ವರ್ಷದೊಳಗೆ ಸುರತ್ಕಲ್ ಮತ್ತು ಮೂಲ್ಕಿ ನಿಲ್ದಾಣಗಳನ್ನು ಕ್ರಮವಾಗಿ 1.57 ಕೋಟಿ ರೂ ಮತ್ತು 1.46 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಪ್ಲಾಟ್‌ಫಾರ್ಮ ಮೇಲ್ಛಾವಣಿ ನಿರ್ಮಾಣವನ್ನು ಇದು ಒಳಗೊಂಡಿದೆ ಎಂದು ಕಾರವಾರದ ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ತಿಳಿಸಿದರು.
* ಅಮೃತ್ ಭಾರತ್
ಸ್ಟೇಷನ್ ಕಾಮಗಾರಿಗೆ ವೇಗ
ನೈಋತ್ಯ ರೈಲ್ವೆ ವ್ಯಾಪ್ತಿಯ ಸುಬ್ರಹ್ಮಣ್ಯ ರೋಡ್ ಮತ್ತು ಬಂಟ್ವಾಳ ನಿಲ್ದಾಣ ಮತ್ತು ದಕ್ಷಿಣ ರೈಲ್ವೆ ವ್ಯಾಪ್ತಿಯ ಮಂಗಳೂರು ಜಂಕ್ಷನ್‌ನಲ್ಲಿ ಅಮೃತ್ ಭಾರತ್ ಸ್ಟೇಷನ್ (ಎಬಿಎಸ್‌ಎಸ್) ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಕ್ಯಾಪ್ಟನ್ ಚೌಟ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಎಬಿಎಸ್‌ಎಸ್ ಕಾಮಗಾರಿಗೆ ವೇಗ ನೀಡುವಂತೆ ವಲಯಗಳಿಗೆ ನಿರ್ದೇಶನ ನೀಡಿದರು.
* ಬೈಕಂಪಾಡಿ ಲೆವಲ್
ಕ್ರಾಸಿಂಗ್ ಪರಿಶೀಲನೆಗೆ ಸೂಚನೆ
ಬೈಕಂಪಾಡಿ ಪೇಟೆಯಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರೈಲ್ವೆ ಲೆವಲ್ ಕ್ರಾಸಿಂಗ್ ಅನ್ನು 30 ವರ್ಷಗಳ ಹಿಂದೆ ಮುಚ್ಚಲಾಗಿದೆ. ಇದರಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗುವ ವಾಹನಗಳು ಸುತ್ತಿ ಬಳಸಿ ಹೋಗಬೇಕಾಗಿದೆ.
ಅಲ್ಲದೆ ಇತ್ತೀಚೆಗೆ ರೈಲ್ವೇ ಇಲಾಖೆಯು ಇಲ್ಲಿ ಸಾರ್ವಜನಿಕರು ಹಳಿ ದಾಟದಂತೆ ತಡೆಗೋಡೆ ನಿರ್ಮಿಸಿದ್ದು, ಇದರಿಂದ ತೀವ್ರ ತೊಂದರೆಯಾಗಿದೆ.
ಈ ರೈಲ್ವೇ ಗೇಟನ್ನು ಮತ್ತೆ ತೆರೆಯಬೇಕು ಎಂದು ಸಾರ್ವಜನಿಕರು ಮತ್ತು ಕೈಗಾರಿಕಾ ಸಂಘಟನೆಗಳಿಂದ ತೀವ್ರ ಒತ್ತಡವಿದೆ ಆದ್ದರಿಂದ ಇಲ್ಲಿ ಲೆವಲ್ ಕ್ರಾಸಿಂಗ್ ಮತ್ತೆ ತೆರೆಯಬೇಕು ಎಂದು ಶಾಸಕ ಭರತ್ ಶೆಟ್ಟಿ ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಂಸದರು, ಈ ಬಗ್ಗೆ ಪರಿಶೀಲಿಸುವಂತೆ ದಕ್ಷಿಣ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಶಾಸಕ ಉಮಾನಾಥ್ ಕೋಟ್ಯಾನ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಪಾಲಕ್ಕಾಡ್ ಹೆಚ್ಚುವರಿ ಡಿಆರ್‌ಎಂ ಕೆ. ಅನಿಲ್ ಕುಮಾರ್ ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿ.ಪಿ. ದಿನೇಶ್ ಕುಮಾರ್ ಉಪಸ್ಥಿತರಿದ್ದರು.