

ಸವಣೂರ: ಮೈಸೂರು ಅರಸರ ಪ್ರೋತ್ಸಾಹದೊಂದಿಗೆ ಉನ್ನತ ಶಿಕ್ಷಣ ಪೂರೈಸಿದ ಸಾಮಾನ್ಯ ಯುವಕ ರಾಷ್ಟ್ರಮಟ್ಟದಲ್ಲಿ ಭಾವಸಾರ ಕ್ಷತ್ರೀಯ ಮಹಾಸಭಾ ಸ್ಥಾಪಿಸಿದ ಇತಿಹಾಸವನ್ನು ಸಮಾಜ ಬಾಂಧವರು ಮರೆಯಬಾರದು ಎಂದು ಭಾವಸಾರ ಜ್ಯೋತಿ ಮಾಸ ಪತ್ರಿಕೆ ಕನ್ನಡ ವಿಭಾಗದ ಸಂಪಾದಕ ಉಮೇಶ ದಾಮೋದರ ಹೇಳಿದರು.
ಪಟ್ಟಣದ ವಿಠಲ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ಸಂಸ್ಥಾಪಕ, ಪಿತಾಮಹ ದಿ. ಮಹಾದೇವರಾವ್ ಗೋವಿಂದರಾವ್ ತೇಲಕರ ಅವರ 169ನೇ ಜನ್ಮದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದಿ. ಮಹಾದೇವರಾವ್ ಗೋವಿಂದರಾವ್ ತೇಲಕರ ಅವರು ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೈಸೂರ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಪಾಸಾದರು. ಅವರಿಗೆ ನ್ಯಾಯಾಲಯದಲ್ಲಿ ಕೆಲಸವು ಸಿಕ್ಕಿತ್ತು. ಕೆಲಸದಲ್ಲಿ ಶಿಸ್ತು ಮತ್ತು ದಕ್ಷತೆ ತೋರುತ್ತಿದ್ದ ಪರಿಣಾಮವಾಗಿ ಬಡ್ತಿ ಹೊಂದಿದರು. ನಂತರ 1893ರಲ್ಲಿ ಶಿವಮೊಗ್ಗ ಜಿಲ್ಲೆಯ ಹೆಡ್ ಕ್ವಾಟರ್ಸ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನೇಮಕವಾಗಿ, ಕೇವಲ ಎಂಟು ತಿಂಗಳಿನಲ್ಲಿ ದಾವಣಗೆರೆಯ ಮಾಮ್ಲೇದಾರರಾಗಿ ನೇಮಕಗೊಂಡರು. ಸಂಸ್ಥಾನದ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ ಜನಪ್ರಿಯ ಆಡಳಿತಗಾರನಾಗಿ ರೈತರು, ಬಡವರ ಬಗ್ಗೆ ಅಪಾರ ಕಾಳಜಿ, ಅನುಕಂಪ ಹಾಗೂ ಮಹಿಳೆಯರ ಬಗ್ಗೆ ಕಳಕಳಿ ಇತ್ಯಾದಿ ಮೆಚ್ಚಿ ಮೈಸೂರ ಮಹಾರಾಜರು ತಮ್ಮ ದರ್ಬಾರಿಗೆ ಕರೆಸಿ ಸನ್ಮಾನಿಸಿದ್ದರು ಎಂದರು. 1902ರಲ್ಲಿ ನಿವೃತ್ತಿ ಹೊಂದಿದ ತೇಲಕರ ಅವರು 9 ವರ್ಷಗಳ ಕಾಲ ದೇಶದಲ್ಲಿ ಸಂಚರಿಸಿ ಸಮಾಜ ಬಾಂಧವರನ್ನು ಒಂದುಗೂಡಿಸಿ, 1911ರಲ್ಲಿ ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ಸ್ಥಾಪಿಸಿದರು. ನಂತರ ಸಮಾಜದ ಅಧ್ಯಕ್ಷರಾಗಿ ಹುಬ್ಬಳ್ಳಿಯಲ್ಲಿ ಪ್ರಥಮ ಸಮ್ಮೇಳನವನ್ನು ಕೈಗೊಂಡ ಕೀರ್ತಿ ತೇಲಕರ ಅವರಿಗೆ ಸಲ್ಲುತ್ತದೆ ಎಂದರು.
ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ತಾಲೂಕು ಅಧ್ಯಕ್ಷ ಖಂಡೋಭಾ ರಾಶಿನಕರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಪ್ರಮುಖರಾದ ಮಮತಾ ಶೇಂಡಿಗೆ, ಪಾಂಡುರಂಗ ಮಹೇಂದ್ರಕರ, ವೀಣಾಬಾಯಿ ರಾಶಿನಕರ, ಅಶೋಕ ರಾಶಿನಕರ, ಏಕನಾಥ್ ರಾಶಿನಕರ ಹಾಗೂ ಇತರರು ಪಾಲ್ಗೊಂಡಿದ್ದರು. ಶಿಕ್ಷಕ ವಿ.ಬಿ. ದೋಂಗಡೆ ಕಾರ್ಯಕ್ರಮ ನಿರ್ವಹಿಸಿದರು.