

ವಿಜಯಪುರ: ಭೀಮಾತೀರದಲ್ಲಿ ನಡೆದಿರುವ ಚಿನ್ನದ ವ್ಯಾಪಾರಿಗೆ 5 ಕೋಟಿ ರೂ.ಗಳ ಹಣದ ಬೇಡಿಕೆ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಆರೋಪಿ ಲಕ್ಷ್ಮೀಕಾಂತ ಪಾಟೀಲ ನಿನ್ನೆ ಹಾಗೂ ಇಂದು ಬಿಡುಗಡೆ ಮಾಡಿರುವ ವಿಡಿಯೋ ಬೆನ್ನು ಬಿದ್ದಿರುವ ಪೊಲೀಸರು ಯಾವ ಸ್ಥಳದಲ್ಲಿ ವಿಡಿಯೋ ಮಾಡಿದ್ದಾನೆ, ಇದು ವಿಡಿಯೋ ಮಾಡಿದವರು ಯಾರು ? ವಾಟ್ಸಪ್ ಮೂಲಕ ಮಾಧ್ಯಮ ಸೇರಿ ಇಂಡಿ ತಾಲೂಕಿನಲ್ಲಿ ವಿಡಿಯೋ ಹರಿದಾಡುತ್ತಿರುವದು ಹೇಗೆ ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಾರೆ.
ಲಕ್ಷ್ಮೀಕಾಂತ ಪಾಟೀಲ, ಹಂತಕ ಬಾಗಪ್ಪ ಹರಿಜನ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ಈ ಹಣದ ಬೇಡಿಕೆಯ ಹಿಂದಿನ ರುವಾರಿಗಳಾಗಿದ್ದಾರೆ ಎಂದು ಅವರ ವಿರುದ್ದ ಪ್ರಕರಣ ದಾಖಲಾಗಿದ್ದು, ಮಹಾದೇವ ಸಾಹುಕಾರ ಭೈರಗೊಂಡ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.
ಇನ್ನಿಬ್ಬರು ತಲೆಮರೆಸಿ ಕೊಂಡಿದ್ದು, ಅವರಲ್ಲಿ ಈಗ ಲಕ್ಷ್ಮೀಕಾಂತ ಎರಡೆರಡು ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿ ತಮ್ಮ ವಿರುದ್ಧ ದೂರು ನೀಡಿರುವ ನಾಮದೇವ ಡಾಂಗೆ ವಿರುದ್ಧ ಕಿಡಿಕಾರಿದ್ದಾನೆ. ಪೊಲೀಸರು ಸಹ ಈ ವಿಡಿಯೋಗಳು ಯಾವ ರೀತಿ ಎಲ್ಲೆಡೆ ಹರಡಿರುವ ಕುರಿತು ತನಿಖೆ ನಡೆಸುತ್ತಿದ್ದು, ತನಿಖೆ ಮಾಹಿತಿ ಬಿಟ್ಟು ಕೊಡುತ್ತಿಲ್ಲ.
ಇದಲ್ಲದೆ ಡಾಂಗೆ ಮಗನ ಮದುವೆಯ ವೇಳೆ ನಾಮದೇವ ಡಾಂಗೆ ಹಾಗೂ ಮಹಾದೇವ ಸಾಹುಕಾರ ಸೇರಿ ಆರ್ಕೆಸ್ಟ್ರಾ ಯುವತಿಯರೊಂದಿಗೆ ಡ್ಯಾನ್ಸ್ ಮಾಡಿದ ವೈರಲ್ ಆಗಿದೆ. ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಹಾಗೂ ಮಹಾದೇವ ಸಾಹುಕಾರ ಭೈರಗೊಂಡ ನಡುವೆ ಉತ್ತಮ ಸಂಬಂಧ ಇರುವ ಕುರಿತು ಭೀಮಾತೀರದ ಜನತೆಗೆ ಗೊತ್ತಿದೆ. ಆದರೂ ಲಕ್ಷ್ಮೀಕಾಂತ ಪಾಟೀಲ್ ಬಾಗಪ್ಪ ಹರಿಜನ ಸೇರಿ ವಿರುದ್ಧ 5 ಕೋಟಿ ರೂ.ಗಳ ಹಣದ ಬೇಡಿಕೆಯನ್ನು ಮಹಾದೇವ ಭೈರಗೊಂಡನ ತೋಟದ ಮನೆಯಲ್ಲಿ ಇಟ್ಟಿರುವುದಾಗಿ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ದೂರು ನೀಡಿರುವ ಕುರಿತು ಭೀಮಾತೀರದಲ್ಲಿ ಹತ್ತು ಹಲವು ರೀತಿ ಮಾತುಗಳು ಕೇಳಿ ಬರುತ್ತಿವೆ.
ಇದರ ನಡುವೆ ಮಹಾದೇವ ಸಾಹುಕಾರ ಹಾಗೂ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಇಬ್ಬರು ಮದುವೆಯೊಂದರಲ್ಲಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಹ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇಬ್ಬರು ಮದುವೆಯಲ್ಲಿ ಗ್ರಾಮೀಣ ಭಾಗದ ಹಾಡಿಗೆ ಸಕತ್ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಹ ತುಂಬಾ ವೈರಲ್ ಆಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಎಸ್ ಪಿ ತಿಳಿಸಿದ್ದಾರೆ.