

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಐಎಎಸ್ ಅಧಿಕಾರಿ ಡಾ. ಎಚ್.ಆರ್.ಮಹಾದೇವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2019ರ ಆಗಸ್ಟ್ನಿಂದ ಬಿಡಿಎ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿ.ಸಿ.ಪ್ರಕಾಶ್ ಅವರನ್ನು ಮೈಸೂರಿನ ಪ್ರಾದೇಶಿಕ ಅಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಮೈಸೂರು ವಿಭಾಗದಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವ ಉಸ್ತುವಾರಿಯನ್ನು ಕೂಡ ಪ್ರಕಾಶ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಪ್ರಕಾಶ್ ಅವರ ಜಾಗಕ್ಕೆ ನೇಮಕಗೊಂಡಿರುವ ಡಾ.ಮಹಾದೇವ್ ಅವರು 2008ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಇವರು ಕಳೆದೆರಡು ವರ್ಷಗಳಿಂದ ಬೀದರ್ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈಗ ಮಹಾದೇವ್ ಅವರ ಜಾಗಕ್ಕೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಆರೋಗ್ಯ ನಿರ್ದೇಶನಾಲಯದ ನಿರ್ದೇಶಕ ರಾಮಚಂದ್ರನ್ ಅವರನ್ನು ನೇಮಕ ಮಾಡಲಾಗಿದೆ. ರಾಮಚಂದ್ರನ್ ಅವರ ಜಾಗಕ್ಕೆ ಬೀದರ್ನ ಜಿಲ್ಲಾಧಿಕಾರಿಯಾಗಿರುವ ಡಾ.ಅರುಂಧತಿ ಚಂದ್ರಶೇಖರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.