ಬಿಸಿಲ ಶಾಖ ತಣಿಸಲು ನೀರು ಸಿಂಪಡಣೆ

06 HANUR 1
ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಆವರಣದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಟ್ಯಾಂಕರ್ ಮೂಲಕ ನೀರು ಸಿಂಪಡಿಸಲಾಯಿತು.
Published on

ಹನೂರು: ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಆವರಣಕ್ಕೆ ಬುಧವಾರ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನೀರು ಸಿಂಪಡಣೆ ಮಾಡುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಿದೆ.

ಮಹಾಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಮ.ಬೆಟ್ಟ ಲಕ್ಷಾಂತರ ಭಕ್ತರಿಂದ ತುಂಬಿ ತುಳುಕುತ್ತಿದೆ. ಭಕ್ತರು ಬಸವ, ಹುಲಿ ಹಾಗೂ ರುದ್ರಾಕ್ಷಿ ವಾಹನಗಳ ಉತ್ಸವಗಳಲ್ಲಿ ಭಾಗಿಯಾಗಿರುವುದರ ಜತೆಗೆ ಮುಡಿಸೇವೆ, ಉರುಳುಸೇವೆ ಹಾಗೂ ಪಂಜಿನ ಸೇವೆ ನೆರವೇರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಬೇಸಿಗೆಯ ಬಿಸಿಲು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರ ಕಳೆದ 2 ದಿನದ ಹಿಂದೆಯೇ ದೇಗುಲದ ಹೊರಾಂಗಣದಲ್ಲಿ ಓಡಾಡಲು ಅನುಕೂಲವಾಗುವಂತೆ ಮ್ಯಾಟ್ ಹಾಕಲಾಗಿತ್ತು.

ಬುಧವಾರ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಎಲ್ಲ ಭಕ್ತರಿಗೆ ಮ್ಯಾಟ್ ಮೂಲಕ ನಡೆದು ಹೋಗಲು ಸಾಧ್ಯವಿರಲಿಲ್ಲ. ಇದರಿಂದ ಭಕ್ತರು ಸುಡುವ ನೆಲದಲ್ಲಿಯೇ ದೇಗುಲದ ಸುತ್ತಾ ಪ್ರದಕ್ಷಿಣೆ ಹಾಕುತ್ತಿದ್ದರು. ಇದನ್ನು ಮನಗಂಡ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ದೇಗುಲದ ಸುತ್ತಲು ಟ್ಯಾಂಕರ್ ಮೂಲಕ ಆಗಾಗ್ಗೆ ನೀರು ಸಿಂಪಡಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು.

ಸ್ವಚ್ಛತೆ ಕಾರ್ಯ ಚುರುಕು: ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ದೇಗುಲದ ಆವರಣ, ಭಕ್ತರು ಬೀಡು ಬಿಟ್ಟಿರುವ ಸ್ಥಳ, ಭಕ್ತರು ತೆರಳುವ ಸರತಿ ಸಾಲು, ರಸ್ತೆ ಬದಿ, ಬಸ್ ನಿಲ್ದಾಣ ಸೇರಿದಂತೆ ಜನಸಂದಣಿ ಸ್ಥಳಗಳಲ್ಲಿ ಆಗಾಗ್ಗೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜತೆಗೆ ಭಕ್ತರು ಎಲ್ಲೆಂದರಲ್ಲಿ ಬಿಸಾಡಿರುವ ಚಪ್ಪಲಿಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಮೂಲಕ ಸ್ವಚ್ಛತಾ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಪ್ರಾಧಿಕಾರದ ಕಾರ್ಯದರ್ಶಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಭಕ್ತರೊಂದಿಗೆ ಊಟ ಸವಿದ ಕಾರ್ಯದರ್ಶಿ: ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರು ಬುಧವಾರ ದಾಸೋಹ ಭವನಕ್ಕೆ ತೆರಳಿ ವಿಶೇಷ ದಾಸೋಹ ವ್ಯವಸ್ಥೆಯನ್ನು ಪರಿಶೀಲಿಸಿದರು. ಶುಚಿತ್ವ ಕಾಪಾಡುವುದರ ಜತೆಗೆ ಊಟ, ತಿಂಡಿ ವ್ಯವಸ್ಥೆಯು ರುಚಿ, ಶುಚಿಯಿಂದ ಕೂಡಿರಬೇಕು ಎಂದು ನೌಕರರಿಗೆ ಸೂಚಿಸಿದರು. ಬಳಿಕ ಭಕ್ತರ ಜತೆಯಲ್ಲೇ ಕುಳಿತು ಊಟ ಸೇವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net