ಮಹದೇಶ್ವರಸ್ವಾಮಿ ಅದ್ದೂರಿ ರಥೋತ್ಸವ

30pnd1
ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಪಾಂಡವಪುರ: ದೀಪಾವಳಿ ಹಬ್ಬದ ಅಂಗವಾಗಿ ತಾಲೂಕಿನ ಮಹದೇಶ್ವರಪುರ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮಹದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಮಹದೇಶ್ವರಪುರ ಗ್ರಾಮದ ಯಜಮಾನರು, ಮಹದೇಶ್ವರಸ್ವಾಮಿ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರು ನೇತೃತ್ವದಲ್ಲಿ ಆರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಎಣ್ಣೆಮಜ್ಜನ, ಹಾಲರಿವೆ ಮತ್ತು ಬಾಯಿಬೀಗ ಕಾರ್ಯಕ್ರಮ ನಡೆಯಿತು. ನಂತರ 23ರಿಂದ ಒಂದು ವಾರಗಳ ಕಾಲ ಅಕ್ಕಪಕ್ಕದ ಗ್ರಾಮಸ್ಥರು ಹುಲಿವಾಹನೋತ್ಸವ ನಡೆಸುವ ಮೂಲಕ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.

ಜಾತ್ರೆಯ ಅಂಗವಾಗಿ ಅ.28ರಂದು ಮಹದೇಶ್ವರಪುರ ಗ್ರಾಮದಲ್ಲಿ ಮಹದೇಶ್ವರಸ್ವಾಮಿ ದೇವರ ಹೂವಿನ ಪಲಕ್ಕಿ ಉತ್ಸವ ನಡೆಸಲಾಯಿತು. ಅಂತಿಮ ದಿನವಾದ ಬುಧವಾರ ಸಂಜೆ ಮಹದೇಶ್ವರಸ್ವಾಮಿ ರಥೋತ್ಸವ ನಡೆಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು.

ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ರಥ ಎಳೆದರು. ರಥಕ್ಕೆ ಹಣ್ಣು ದವನ ಎಸೆದು ಉಘೇ ಮಾದಪ್ಪ.. ಉಘೇ ಮಾದಪ್ಪ ಎಂಬ ಘೋಷಣೆ ಕೂಗುವ ಮೂಲಕ ಭಕ್ತಿಭಾವ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net