

ಮದ್ದೂರು: ತಾಲೂಕಿನ ಹೊಸಗಾವಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಮಹದೇಶ್ವರಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಸಂಭ್ರಮದಿಂದ ಜರುಗಿದವು.
ಕಾರ್ತಿಕ ಅಮಾವಾಸ್ಯೆಯಿಂದ 9 ದಿನಗಳು ನಡೆಯುವ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಂಗಳವಾರ ಹಾಲರವಿ, ಬಾಯಿಬೀಗ ಮುಂತಾದ ಹಲವು ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವಯ. ಜಿ.ಹೊಸಹಳ್ಳಿ ಗ್ರಾಮಸ್ಥರಿಂದ ಹಾಲರವಿ ಸೇವೆ ಹಾಗೂ ಹೊಸಗಾವಿ ಗ್ರಾಮಸ್ಥರಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಹುಲಿವಾಹನೋತ್ಸವ ಸಂಭ್ರಮದಿಂದ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
16ರಂದು ಮಹಾಮಂಗಳಾರತಿ, 17ರಂದು ರುದ್ರಾಕ್ಷಿ ಮಂಟಪೋತ್ಸವ, ಕುಜ್ರೋತ್ಸವ, 18ರಂದು ಹುಲಿವಾಹನೋತ್ಸವ, 19ರಂದು ಸಂಜೆ 4ಗಂಟೆಗೆ ರಥೋತ್ಸವ, 20 ಹಾಗೂ 21ರಂದು ಹುಲಿವಾಹನೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.
ದೇವಾಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆಯಲ್ಲಿ 8 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಒಬ್ಬಟ್ಟಿನ ಊಟ, ಅನ್ನ-ಸಾಂಬಾರ್ ಮತ್ತು ಪಲ್ಯ ಉಣಬಡಿಸಿದ್ದು ವಿಶೇಷವಾಗಿತ್ತು.