

ಹುಬ್ಬಳ್ಳಿ: ಮಹದಾಯಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನ್ಯಾಯಾಧಿಕರಣಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ. ನ್ಯಾಯಾಧಿಕರಣ ರಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಇದರಿಂದಾಗಿ ಯೋಜನೆ ಎಂಟು ಹತ್ತು ವರ್ಷ ತಡವಾಯಿತು. ಇಂಥ ದೊಡ್ಡ ಅಪರಾಧ ಮಾಡಿದ್ದು ಕಾಂಗ್ರೆಸ್ ಎಂದರು.
ಮಹದಾಯಿ ಮತ್ತು ಮಲಪ್ರಭಾ ನಡುವೆ ಇಂಟರ್‌ಲಿಂಕಿಂಗ್ ಕಾಲುವೆ ಮಾಡಿದ್ದೆವು. ಇದಕ್ಕೆ ಕಾಂಗ್ರೆಸ್‌ನವರು ಗೋಡೆ ಕಟ್ಟಿದರು. ಗೋಡೆ ಕಟ್ಟಿದ ಅಪಖ್ಯಾತಿ ಕಾಂಗ್ರೆಸ್‌ನದ್ದು. ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಇದಕ್ಕೆ ಸಂಪೂರ್ಣ ವಿರೋಧ ಮಾಡಿತು. ಬಿಜೆಪಿ ಸರ್ಕಾರವಿದ್ದಾಗ ಡಿಪಿಆರ್‌ಗೆ ಅನುಮತಿ ಪಡೆಯಲಾಗಿತ್ತು. ಐದು ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್‌ಗೆ ಅನುಮತಿ ಪಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಇದು ಸದ್ಯ ಪರಿಸರ ಇಲಾಖೆಯಲ್ಲಿದೆ. ಕೆಲ ಮಾಹಿತಿ ಕೇಳಲಾಗಿದೆ. ರಾಜ್ಯ ಸರ್ಕಾರ ಮಾಹಿತಿ ಕೊಡಲಿ. ನಾವು ಸಹ ಪರಿಸರ ಇಲಾಖೆ ಮೇಲೆ ಒತ್ತಡ ಹೇರುತ್ತೇವೆ. ಅನುಮತಿ ಪಡೆಯದೇ ಟೆಂಡರ್ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಗೋವಾದವರು ಕೋರ್ಟ್‌ಗೆ ಹೋಗಿದ್ದಾರೆ. ರಾಜ್ಯ ಸರ್ಕಾರ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆ, ಮೇಕೆದಾಟು ಸೇರಿ ಎಲ್ಲ ನೀರಾವರಿ ಯೋಜನೆ ವಿಚಾರದಲ್ಲೂ ರಾಜ್ಯ ಸರ್ಕಾರ ನಿರ್ಲಕ್ಷೃ ತೋರಿದೆ.
ಈ ಸರ್ಕಾರ ಬಂದ ಮೇಲೆ ನಯಾ ಪೈಸೆ ಹಣ ಬಿಡುಗಡೆಯಾಗಿಲ್ಲ. ಗೋಡೆ ಕಟ್ಟಿದ ಬಗ್ಗೆ, ಟ್ರಿಬ್ಯುನಲ್ ಮಾಡಿದ ಬಗ್ಗೆ ಮೊದಲು ಅವರು ಉತ್ತರ ಕೊಡಲಿ. ಪ್ರಧಾನಿ ಮೋದಿ ಅವರು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.