ಮಹದಾಯಿ, ಕಳಸಾ- ಬಂಡೂರಿ ಹೋರಾಟಗಾರರು ನಿರಾಳ

KALASA
ನರಗುಂದ ಪಟ್ಟಣದಲ್ಲಿ ರೈತ ಮುಖಂಡ ಶಂಕರಪ್ಪ ಅಂಬಲಿ ಬುಧವಾರ ಮಾತನಾಡಿದರು. ಕಾಡಪ್ಪ ಕಾಕನೂರ, ಪ್ರವೀಣ ಯರಗಟ್ಟಿ ಇದ್ದರು.
Published on

ನರಗುಂದ: ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇರೆಗೆ ಮಹದಾಯಿ ಮತ್ತು ಕಳಸಾ- ಬಂಡೂರಿ ಹೋರಾಟಗಾರರ ಮೇಲೆ ದಾಖಲಾಗಿದ್ದ ಕೇಸ್ ೮ ವರ್ಷದ ಸುದೀರ್ಘ ವಿಚಾರಣೆ ಬಳಿಕ ಅಂತ್ಯಗೊಂಡಿದೆ. ಸಾರ್ವಜನಿಕ ಹೋರಾಟಗಾರರು ಎಂದು ಘೋಷಿಸಿ ರೈತರು ನಿರಪರಾಧಿಗಳಾಗಿದ್ದಾರೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಜೀನಪ್ಪ ಚೌಗಲಾ ಅವರು ಬುಧವಾರ ಆದೇಶ ನೀಡಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.
ಏನಿದು ಪ್ರಕರಣ: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಮಹದಾಯಿ, ಕಳಸಾ-ಬಂಡೂರಿ ಹೋರಾಟ ೨೦೧೭ರಲ್ಲಿ ತೀವ್ರ ಕಾವು ಪಡೆದುಕೊಂಡಿತ್ತು. ಈ ಮಹತ್ವದ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಿಂಚಿತ್ತೂ ಸ್ಪಂದಿಸದ ಕಾರಣ ಅಚ್ಚುಕಟ್ಟು ಪ್ರದೇಶದ ರೈತರು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಎ.ಪಿ. ಪಾಟೀಲ ಅವರ ಗೋದಾಮಿನಲ್ಲಿ ಸಭೆ ಸೇರಿ ಹುಬ್ಬಳ್ಳಿಯ ರೈಲ್ವೆ ರೋಖೋ ಚಳವಳಿ ನಡೆಸುವ ಕುರಿತು ಚರ್ಚಿಸಲಾಗುತ್ತಿತ್ತು. ಈ ವೇಳೆ ಸಭೆಗೆ ಪ್ರವೇಶಿಸಲು ಪ್ರಯತ್ನಿಸಿದ ನವಲಗುಂದ ಪೊಲೀಸ್ ಠಾಣೆ ಇಂಟಲಿಜೆನ್ಸಿ ಬಾಪುಗೌಡ ಪಾಟೀಲ ಎಂಬುವರ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ಬಾಪುಗೌಡ ಪಾಟೀಲ, ಮಹದಾಯಿ ಮುಂಚೂಣಿ ಹೋರಾಟಗಾರರಾದ ನವಲಗುಂದ ತಾಲೂಕಿನ ಲೋಕನಾಥ ಹೆಬಸೂರ, ಶಂಕರಪ್ಪ ಅಂಬಲಿ, ಹರೀಶ ಕಾಲವಾಡ, ಸಂತೋಷ ವಡ್ಡರ, ನರಗುಂದ ತಾಲೂಕಿನ ಪರಶುರಾಮ ಜಂಬಗಿ, ವೀರಬಸಪ್ಪ ಹೂಗಾರ, ಬಸವರಾಜ ಸಾಬಳೆ, ಕಾಡಪ್ಪ ಕಾಕನೂರ, ವಿಠ್ಠಲ ಜಾಧವ, ಜೀನಪ್ಪ ಮುತ್ತಿನ, ದಿ. ಎ.ಪಿ. ಪಾಟೀಲ ಸೇರಿ ಒಟ್ಟು ೧೨ ರೈತ ಮುಖಂಡರ ಮೇಲೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

೨೦೧೮ರಲ್ಲಿ ಎಲ್ಲ ರೈತರು ಜಾಮೀನು ಪಡೆದುಕೊಂಡಿದ್ದರು. ಇದುವರೆಗಿನ ಅವಧಿಯಲ್ಲಿ ಹೋರಾಟಗಾರರಿಗೆ ೪-೫ ಸಲ ಅರೆಸ್ಟ್ ವಾರಂಟ್ ಕೂಡ ಜಾರಿಗೊಳಿಸಲಾಗಿತ್ತು. ದೂರುದಾರ ಪೇದೆ ಬಾಪುಗೌಡ ಪಾಟೀಲ ಪರವಾಗಿ ಸರ್ಕಾರಿ ಅಭಿಯೋಜಕರು, ರೈತರ ಪರವಾಗಿ ವಕೀಲರಾದ ಎಂ.ಬಿ. ಕುಲಕರ್ಣಿ, ವಿ.ಎ. ಮೂಲಿಮನಿ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಜೂನ್, ಜುಲೈನಲ್ಲಿ ಅಂತಿಮ ವಿಚಾರಣೆ ನಡೆಸಿ ಕಾಯ್ದಿರಿಸಿದ ತೀರ್ಪನ್ನು ಬುಧವಾರ ಪ್ರಕಟಿಸಿದ ನ್ಯಾಯಾಧೀಶರು, ಆರೋಪಗಳು ಸಾಬೀತಾಗಿಲ್ಲ ಎಂದು ಘೋಷಿಸಿ ಆದೇಶ ನೀಡಿದರು.

ತೀರ್ಪು ಪ್ರಕಟವಾದ ನಂತರ ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ಮಹದಾಯಿ, ಕಳಸಾ- ಬಂಡೂರಿಗಾಗಿ ನಡೆಸಿದ ಪ್ರಾಮಾಣಿಕ ಹೋರಾಟದಲ್ಲಿ ಪೊಲೀಸರು ನೂರಾರು ಅಮಾಯಕ ರೈತರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ರೈತರ ಮೇಲಿರುವ ಎಲ್ಲ ಕೇಸ್ ಹಿಂಪಡೆದುಕೊಳ್ಳುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಸರ್ಕಾರಗಳಿಂದ ಸೂಕ್ತ ಸ್ಪಂದನೆ ದೊರೆತಿರಲಿಲ್ಲ. ಆದರೀಗ ಮಹದಾಯಿ ನೀರು ಬರದಿದ್ದರೂ ಪರವಾಗಿಲ್ಲ. ಅಮಾಯಕ ರೈತರು ನಿರಪರಾಧಿಗಳು ಎಂಬ ತೀರ್ಪನ್ನು ನ್ಯಾಯಾಲಯ ನೀಡಿರುವುದು ಸಾಕಷ್ಟು ಖುಷಿ ತಂದಿದೆ. ನ್ಯಾಯ ದೇವತೆಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ಹುಬ್ಬಳ್ಳಿಯ ರೈಲ್ವೆ ರೋಖೋ, ಅಮ್ಮಿನಭಾವಿ ಜಾಕ್‌ವೆಲ್ ಬಂದ್ ಹಾಗೂ ನರಗುಂದ, ನವಲಗುಂದದಲ್ಲಿ ನಡೆದ ಕಳಸಾ ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ಅಮಾಯಕ ರೈತರ ಮೇಲೆ ದಾಖಲಿಸಿಕೊಂಡಿರುವ ಸುಳ್ಳು ಪ್ರಕರಣಗಳನ್ನು ಸರ್ಕಾರ ಇನ್ನಾದರೂ ಕೈಬಿಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net