ಮಹದಾಯಿ ಗೆಜೆಟ್ ಪ್ರಕಟ: ಪಟ್ಟು ಹಿಡಿದು ಗುರಿ ಸಾಧಿಸಿದರು..

Mahadayi
Published on

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ಒಂದೇ ವಾರದಲ್ಲಿ ಮಹದಾಯಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಫೆ.20ರಂದು ಕರ್ನಾಟಕ ಪಾಲಿಗೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದೇ ದಿನ ಯಡಿಯೂರಪ್ಪ ಈ ವಿಚಾರವನ್ನು ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿ ಸಂತಸ ಹಂಚಿಕೊಂಡಿದ್ದರು. ಸುಪ್ರೀಂಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಕೂಡಲೇ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಸರ್ಕಾರ ಒತ್ತಡ ಹೇರಿತ್ತು. ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಕೇಂದ್ರ ಸಚಿವರ ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಮತ್ತೊಂದೆಡೆ ಯೋಜನೆ ಕೈಗೆತ್ತಿಗೊಳ್ಳಲು ಕರ್ನಾಟಕಕ್ಕೆ ಅವಕಾಶ ನೀಡದಂತೆ ಕೋರಿ ಸುಪ್ರೀಂ ಮೊರೆ ಹೋಗಲು ಗೋವಾ ತೀರ್ಮಾನಿಸಿದೆ.

ಮಹದಾಯಿ ನದಿ ನೀರು ಹಂಚಿಕೆ ಕುರಿತು ಕೇಂದ್ರ ಸರ್ಕಾರ ತ್ವರಿತವಾಗಿ ಗೆಜೆಟ್ ಹೊರಡಿಸಿರುವುದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಬೇಡಿಕೆಗೆ ಸ್ಪಂದಿಸಿ ಅಧಿಸೂಚನೆ ಹೊರಡಿಸಿರುವುದಕ್ಕಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹಾಗೂ ಪ್ರಧಾನಿಗೆ ಆಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ.ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸುವ ಬಗ್ಗೆ ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿತ್ತು. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹಾಗೂ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಹಾಗೂ ರಾಜ್ಯದ ಉನ್ನತ ಅಧಿಕಾರಿಗಳು ನಿಯೋಗದಲ್ಲಿದ್ದರು.

ಅಧಿಸೂಚನೆ ಹೊರಡಿಸಲು ಗೋವಾ ವಿರೋಧ ವ್ಯಕ್ತಪಡಿಸಿಲ್ಲ. ಹೀಗಾಗಿ ಕೇಂದ್ರದ ಮುಂದೆ ಯಾವುದೇ ಸಮಸ್ಯೆ ಇಲ್ಲ ಎಂದು ಮನವರಿಕೆ ಮಾಡಿ ಕೊಟ್ಟಿದ್ದಲ್ಲದೆ, ಅಧಿಸೂಚನೆ ಹೊರಡಿಸಿದರೆ ನ್ಯಾಯಾಧಿಕರಣ ನಿಗದಿ ಮಾಡಿರುವ ನೀರಿನ ಬಳಕೆ ಹಾಗೂ ಕಾಮಗಾರಿ ಕಾರ್ಯ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಚಿವ ಜೋಶಿ ವಿವರಿಸಿ ಗುರುವಾರ ಇಡೀ ದಿನ ಒತ್ತಡ ಹೇರಿ, ಗೆಜೆಟ್ ಪ್ರಕಟಣೆ ಆಗುವವರೆಗೂ ಪ್ರಯತ್ನಿಸಿದರು.

ಉತ್ತರ ಕರ್ನಾಟಕದ ಬಹುದಿನ ಗಳ ಬೇಡಿಕೆಯಾದ ಮಹದಾಯಿ ನದಿ ನೀರು ಯೋಜನೆ ಜಾರಿ ಸಂಬಂಧಿಸಿದಂತೆ ರಾಜ್ಯದ 13.05 ಟಿಎಂಸಿ ನೀರು ಬಳಸುವ ಕುರಿತು ಸುಪ್ರೀಂಕೋರ್ಟ್ ತೀರ್ಪಿನಂತೆ ಕೇಂದ್ರ ಸರ್ಕಾರದ ಅಧಿಸೂಚನೆ ಸ್ವಾಗತಾರ್ಹ. | ಎನ್. ರವಿಕುಮಾರ್ ಮೇಲ್ಮನೆ ಸದಸ್ಯ ಕರ್ನಾಟಕವು ನಿರೀಕ್ಷೆಯಿಂದ ಕಾಯುತ್ತಿದ್ದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ನಿನ್ನೆ ನಾವು ಕೇಂದ್ರದ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಕೂಡಲೇ ಅಧಿಸೂಚನೆ ಹೊರಡಿಸಲು ಮನವಿ ಮಾಡಿದ್ದೆವು. | ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net