

ಬೆಳಗಾವಿ: ಬಿಹಾರದಲ್ಲಿರುವ ಮಹಾಬೋಧಿ ಮಹಾವಿಹಾರವನ್ನು ಬುದ್ಧರಿಗೆ ಇಲ್ಲವೇ ಬೌದ್ಧ ಸಿದ್ದಾಂತಕ್ಕೆ ಸಂಬಂಧಿಸಿದ ಸಂಸ್ಥೆಗೆ ವಹಿಸಿಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಬೆಳಗಾವಿ ಶಾಖೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವಿವಿಧ ಸಂಟನೆಗಳ ಪ್ರಮುಖರು ಆಯಾ ರಾಜ್ಯಕ್ಕೆ ಸಂಬಂಧಿಸಿದ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಬಿಹಾರ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳಿಗೆ ರವಾನಿಸಿದರು.
ಮಹಾಬೋಧಿ ಮಹಾವಿಹಾರಕ್ಕೆ ಸಂಬಂಧಿಸಿದಂತೆ ಬೋಧಗಯಾ ಮಂದಿರ ಅಧಿನಿಯಮ 1949ರ ಅಡಿಯಲ್ಲಿ ಬಿಹಾರ ಸರ್ಕಾರ ರಚಿಸಿರುವ ಸಮಿತಿಯಲ್ಲಿ 9 ಸದಸ್ಯರ ಪೈಕಿ ನಾಲ್ವರು ಮಾತ್ರ ಬುದ್ಧರಿದ್ದಾರೆ. ಈ ಕೂಡಲೇ ಸಂಪೂರ್ಣ ಆಡಳಿತವನ್ನು ಬುದ್ಧರಿಗೆ ವಹಿಸಬೇಕು. ಇಲ್ಲವೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಭೀಮರಾವ್ ಯಶವಂತ ಅಂಬೇಡ್ಕರ್ ನೇತೃತ್ವದಲ್ಲಿ ಸಮಿತಿ ಕಾರ್ಯಗಳಾಗಬೇಕು ಎಂದರು.
ಮಧ್ಯಪ್ರದೇಶದ ಮಹುವಿನಲ್ಲಿರುವ ಡಾ.ಅಂಬೇಡ್ಕರ್ ಸ್ಮಾರಕದಲ್ಲಿ ಅಂಬೇಡ್ಕರ್ ವಿಚಾರಧಾರೆಗಳಿಗೆ ವಿರುದ್ಧವಾದ ಕಾರ್ಯಗಳು ನಡೆಯುತ್ತಿವೆ. ಈ ಜನ್ಮಸ್ಥಳ ಸ್ಮಾಕರದ ಸಂಪೂರ್ಣ ಉಸ್ತುವಾರಿಯನ್ನು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರದ ನಾಗಪುರದಲ್ಲಿನ ಅಂಬೇಡ್ಕರರ ದಿಕ್ಷಾಭೂಮಿ ಸ್ಮಾರಕ ನಿರ್ಮಾಣದ ನಿರ್ವಹಣಾ ಅಧಿಕಾರವನ್ನು ದಿಕ್ಷಾಭೂಮಿ ಸ್ಮಾರಕ ನಿರ್ಮಾಣ ಸಮಿತಿ ಅಸಂವಿಧಾನಿಕವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದು ಖಂಡನಾರ್ಹ. ಇದನ್ನು ಮೊದಲಿನಂತೆಯೇ ಬುದ್ಧಿಸ್ಟ್ ಸೊಸೈಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಲ್ಲೇಶ ಚೌಗುಲೆ, ಯಮನಪ್ಪ ಗಡಿನಾಯಕ, ರಾಜು ಕಾಂಬಳೆ, ಕಲ್ಲಪ್ಪ ಚೌಗಲೆ, ಸುರೇಖಾ ಕಾಂಬಳೆ, ರೇಣುಕಾ ಸಾಲಿಮನಿ, ಸ್ಮಿತಾ ಕಡೂಲ್ಕರ, ಸುಮಿತ್ರ ಜೀರಗ್ಯಾಳ, ಕವಿತಾ ಕಾಂಬಳೆ, ಇತರರಿದ್ದರು.