ಶ್ರದ್ಧೆ, ಭಕ್ತಿಯಿಂದ ಮಹಾ ಶಿವರಾತ್ರಿ ಆಚರಣೆ

ndg 26-1
ನಿಡಗುಂದಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿನ ಶಿವನ ದೇವಸ್ಥಾನಕ್ಕೆ ನೈವೇದ್ಯ ಸಮರ್ಪಿಸಲು ಸೇರಿದ ಭಕ್ತರು.
Published on

ನಿಡಗುಂದಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಭಕ್ತರು ಬೆಳಗ್ಗೆ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಜಪ, ಇಡೀ ದಿನ ಉಪವಾಸ ವ್ರತ ನಡೆಸಿದರು. ರುದ್ರಮಂತ್ರ ಪಠಣ, ದೂಪ, ದೀಪಗಳಿಂದ ಶಿವನಿಗೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ಸಂಜೆ ಶಿವನ ದೇವಸ್ಥಾನಕ್ಕೆ ತೆರಳಿ ನೈವೇದ್ಯ ಅರ್ಪಿಸಿ ದೇವಸ್ಥಾನದಲ್ಲಿ ನೀಡುವ ಪ್ರಸಾದ ಸೇವಿ ಉಪವಾಸ ಕೈಬಿಟ್ಟರು.

ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ನಿಡಗುಂದಿಯಲ್ಲಿನ ಬಸವ ಉದ್ಯಾನದಲ್ಲಿ 33 ಅಡಿ ಎತ್ತರದ ಧ್ಯಾನಸ್ಥ ಭಂಗಿಯಲ್ಲಿ ಕುಳಿತ ಶಿವನ ಮೂರ್ತಿ ಹಾಗೂ ರಾಮಲಿಂಗೇಶ್ವರ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಮಲಿಂಗೇಶ್ವರ ದೇವಸ್ಥಾನದ ಶಿವಲಿಂಗ ಪುರಾತನವಾಗಿದ್ದು, ಅಪಾರ ಶಕ್ತಿ ಹೊಂದಿದ್ದಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಶಿವನಿಗೆ ಅಪಾರ ಭಕ್ತಸಮೂಹವಿದ್ದು ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಬುಧವಾರ ಸಾವಿರಾರು ಭಕ್ತರು ಸರತಿಯಲ್ಲಿ ಶಿವನಿಗೆ ಹಣ್ಣು ಸೇರಿ ವಿವಿಧ ಖಾದ್ಯಗಳ ನೈವೇದ್ಯ ಸಮರ್ಪಿಸಿದರು. ಭಕ್ತರಿಗೆ ಹನುಮಾನ ಗೆಳೆಯರ ಬಳಗದಿಂದ ಸಾಬುದಾನಿ ವಿತರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜ್ಯೋತಿರ್ಲಿಂಗ ದರ್ಶನ: ನಿಡಗುಂದಿಯ ಬಸವ ಉದ್ಯಾನವನದಲ್ಲಿ ಬ್ರಹ್ಮಾಕುಮಾರಿಸ್ ವಿಶ್ವವಿದ್ಯಾಲಯದ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಬುಧವಾರ ಹಾಗೂ ಗುರುವಾರ ಭಕ್ತರಿಗೆ ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ಓಂಕಾರೇಶ್ವರ, ವೈದ್ಯನಾಥೇಶ್ವರ, ಭೀಮಾಶಂಕರ, ರಾಮೇಶ್ವರ, ನಾಗೇಶ್ವರ, ವಿಶೇಶ್ವರ, ತ್ರೈಂಬಕೇಶ್ವರ, ಕೇದಾರೇಶ್ವರ, ಘೃಷ್ಣೇಶ್ವರ ಸೇರಿ 12 ಜೋತಿರ್ಲಿಂಗಗಳ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ನಡೆಯಿತು. ಅಪಾರ ಜನರು ದ್ವಾದಶ ಜೋತಿರ್ಲಿಂಗಗಳ ದರ್ಶನ ಪಡೆದುಕೊಂಡರು.

ಚಿತ್ರ ಪ್ರದರ್ಶನ: 12 ಜೋತಿರ್ಲಿಂಗಗಳ ದರ್ಶನವನ್ನು ಭಕ್ತರಿಗೆ ಉಣಬಡಿಸಿದ ಬ್ರಹ್ಮಾಕುಮಾರಿಸ್ ತಂಡದಿಂದ ಶಿವನ ಆರಾಧನೆ, ಉಪವಾಸ, ಅವನ ಕೃಪೆ ದೊರೆಯುವ ಜತೆಗೆ ಬ್ರಹ್ಮಕುಮಾರಿಸ್ ಅವರ ಕಾರ್ಯ ಚಟುವಟಿಕೆ ಕುರಿತು ಚಿತ್ರ ಪ್ರದರ್ಶನಗಳ ಮೂಲಕ ಭಕ್ತರಿಗೆ ವಿವರಿಸುವ ಕಾರ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net