ನ್ಯಾಯವಾಗಿ ಪರಿವರ್ತನೆಯಾಗಲಿ ಅನ್ಯಾಯ -  ವಿಶ್ವಕರ್ಮ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಸಲಹೆ

PTR_1 AUG_4
Published on

ಪುತ್ತೂರು: ವಿಶ್ವಕರ್ಮ ಸಮುದಾಯದ ಯುವತಿಗೆ ಶ್ರೀಕೃಷ್ಣ ಜೆ.ರಾವ್‌ನಿಂದ ನಡೆದ ಅನ್ಯಾಯದ ವಿಚಾರದಲ್ಲಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ಆಗಮಿಸಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರಮುಖರು ಹಾಗೂ ಉತ್ತರ ಕನ್ನಡ ಮೂಲದ ಸ್ವಾಮೀಜಿಗಳು ಸಂತ್ರಸ್ತೆ ಮನೆಗೆ ಭೇಟಿ ನೀಡಿದರು.

ಕಲಬುರ್ಗಿ ವಿಶ್ವಕರ್ಮ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಎರಡು ಕುಟುಂಬಗಳು ಒಂದಾಗಿ, ಯುವಕ ಯುವತಿ ಹಿಂದಿನ ರೀತಿಯ ಅನ್ಯೋನ್ಯತೆಯನ್ನು ಮುಂದಿನ ಜೀವನದಲ್ಲಿ ಕಾಣಬೇಕು. ಕುಟುಂಬಕ್ಕೆ ಆಗಿರುವ ಅನ್ಯಾಯ ನ್ಯಾಯವಾಗಿ ಪರಿವರ್ತನೆಯಾಗಬೇಕು. ಹುಟ್ಟಿದ ಮಗುವಿಗೆ ನ್ಯಾಯ ಸಿಗಬೇಕೆಂಬ ದೃಷ್ಟಿಯಿಂದ ಸಮಾಜದ ಜತೆಗೆ ಸ್ವಾಮೀಜಿಗಳು ಕುಟುಂಬದ ಜತೆಗೆ ನಿಂತಿದ್ದೇವೆ ಎಂದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ವಿಶ್ವಕರ್ಮ ಮಾತನಾಡಿ, ರಾಜಿ ಮೂಲಕ ಇತ್ಯರ್ಥ ಮಾಡಲು ಮಧ್ಯಸ್ಥಿಕೆ ವಹಿಸುವ ನಿಟ್ಟಿನಲ್ಲಿ ಮುಖಂಡರನ್ನು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಲಬುರ್ಗಿ ಮೂರು ಜಾವದೀಶ್ವರ ಮಠದ ಶ್ರೀ ಪ್ರಣವ ನಿರಂಜನ ಸ್ವಾಮೀಜಿ, ಕೊಪ್ಪಳದ ಸರಸ್ವತಿ ಅಮ್ಮನವರ ಆಸ್ಥಾನದ ಶ್ರೀ ಗಣೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘ ಅಧ್ಯಕ್ಷ ರಿಷಿ ಆಚಾರ್ಯ, ಪುತ್ತೂರು ಪುರಸಭೆ ಮಾಜಿ ಸದಸ್ಯ ಸುರೇಂದ್ರ ಆಚಾರ್ಯ ಮತ್ತಿತ್ತರರು ಉಪಸ್ಥಿತರಿದ್ದರು.

ವಿವಿಧ ಮುಖಂಡರ ಭೇಟಿ

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರಮುಖರನ್ನು ಬೆಳಗ್ಗೆ ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭೇಟಿ ಮಾಡಿ ಚರ್ಚೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನ ಹಿಂದು ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮನೆಗೆ ಭೇಟಿ ನೀಡಿ ಚರ್ಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net