

ಮೈಸೂರು: ಇಲವಾಲ ಬಳಿಯ ಗೊಮ್ಮಟಗಿರಿ ಬಾಹುಬಲಿ ಮೂರ್ತಿಯ 75ನೇ ಮಹಾಮಸ್ತಕಾಭಿಷೇಕ ಮತ್ತು ಅಮೃತ ಮಹೋತ್ಸವ ಎರಡನೇ ದಿನವಾದ ಶನಿವಾರ ಭಕ್ತ ಜೈಕಾರದೊಂದಿಗೆ ವೈಭವದಿಂದ ನೆರವೇರಿತು.
ಸುಮಾರು 200 ಅಡಿ ಎತ್ತರದ ಬೆಟ್ಟದಲ್ಲಿ ನೆಲೆಸಿರುವ 16 ಅಡಿ ಎತ್ತರದ ಬಾಹುಬಲಿಗೆ ಭಟ್ಟಾರಕರ ಸಾನ್ನಿಧ್ಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ, ವಿಧಾನದಿಂದ ಆರಂಭಗೊಂಡ ಮಸ್ತಕಾಭಿಷೇಕವನ್ನು ಭಕ್ತರು ಕಣ್ಮುಂಬಿಕೊಂಡರು.
ಜಲಾಭಿಷೇಕ, ಎಳನೀರು, ಕಬ್ಬಿನ ಹಾಲು, ಅರಿಶಿಣ, ಚಂದನ, ಕ್ಷೀರ, ಚೂರ್ಣ, ಅರಳು, ಸಕ್ಕರೆ ಪುಡಿ, ಅಕ್ಕಿ ಹಿಟ್ಟು, ಶ್ರೀಗಂಧ ಸೇರಿದಂತೆ ವಿವಿಧ ಕಷಾಯಾಭಿಷೇಕ ಸೇರಿದಂತೆ ಒಟ್ಟು 18 ಬಗೆಯ ಅಭಿಷೇಕ ನೆರವೇರಿಸಲಾಯಿತು. ಅಭಿಷೇಕಕ್ಕೂ ಮೊದಲಿಗೆ ಸ್ವಾಮೀಜಿ ಹಾಗೂ ಕ್ಷುಲಿಕಾ ಶ್ರೀ ವಿನಯ ಶ್ರೋಮಾತಾಜಿ ಆಶೀರ್ವಚನ ನೀಡಿದರು. ಮಸ್ತಕಾಭಿಷೇಕಕ್ಕೆ ಬಂದಿದ್ದ ಭಕ್ತರಿಗೆ ದಾನಿಗಳು ಅನ್ನಸಂತರ್ಪಣೆ ನಡೆಸಿದರು.
ಗಣ್ಯರ ಉಪಸ್ಥಿತಿ: ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಎಸ್.ಡಿ.ಮನ್ಮಥ ರಾಜ್, ಕಾರ್ಯದರ್ಶಿ ಪದ್ಮರಾಜಯ್ಯ, ಖಜಾಂಚಿ ರಾಜೇಶ, ಪೂಜಾ ಸಮಿತಿ ಅಧ್ಯಕ್ಷ ಸಂತೋಷ್ ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ್ದ ಧರ್ಮ ಗುರುಗಳು, ಶ್ರಾವಕ, ಶ್ರಾವಕಿಯರು ಹಾಜರಿದ್ದರು.