‘ಮಹಾ’ ಕಂಪನಿಗಳಿಂದ ಪಂಗನಾಮ!

17 BGV seeds 1-Web
‘ಮಹಾ’ ದಂಧೆಕೋರರು ನಕಲಿ ಬೀಜ ಪ್ಯಾಕೆಟ್ ಸಿದ್ಧಗೊಳಿಸಿರುವುದು.
Published on

ಬೆಳಗಾವಿ: ಗಡಿಭಾಗ ಬೆಳಗಾವಿ ಜಿಲ್ಲೆಯಲ್ಲಿ ಕಳಪೆ ಬೀಜಗಳ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ ರೈತರೀಗ ಕಂಗಾಲಾಗಿದ್ದಾರೆ. ಗುಣಮಟ್ಟದ ಬೀಜೋತ್ಪಾದನೆಗೆ ಹೆಸರಾಗಿದ್ದ ಬೆಳಗಾವಿಯ ಬೀಜ ಮಾರುಕಟ್ಟೆಗೆ ಮಹಾರಾಷ್ಟ್ರದ ಮೂಲದ ಕಳಪೆ ಬೀಜ ಲಗ್ಗೆ ಇಡುತ್ತಿದ್ದು, ರೈತರು ‘ಮಹಾ’ ವಂಚನೆಗೆ ಒಳಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗಡಿಭಾಗದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಳಪೆ ಬೀಜಗಳ ಮಾರಾಟಕ್ಕೆ ಜಿಲ್ಲೆಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಡಿವಾಣ ಹಾಕಿದ್ದರು. ಆದರೆ, ಈ ವರ್ಷ ಕರೊನಾ ವೈರಸ್ ಸೋಂಕು ತಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ‘ಮಹಾ’ ದಂಧೆಕೋರರು ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳಪೆ ಬೀಜ ಮಾರಾಟ ಮಾಡುತ್ತಿದ್ದಾರೆ.
ರೈತರಿಗೆ ಆರ್ಥಿಕ ನಷ್ಟ: ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗಿ ಹತ್ತಿ, ಗೋವಿನಜೋಳ, ಸೋಯಾಬೀನ್, ಸೂರ್ಯಕಾಂತಿ, ಕಲ್ಲಂಗಡಿ, ಟೊಮ್ಯಾಟೊ, ಮೆಣಸಿನಕಾಯಿ, ಶೇಂಗಾ, ಬೆಂಡೆಕಾಯಿ ಹಾಗೂ ಹೀರೇಕಾಯಿ ಬೆಳೆಯುತ್ತಾರೆ. ಇದನ್ನರಿತ ‘ಮಹಾ’ ದಂಧೆಕೋರರು ಈ ಬೆಳೆಗಳ ಕಳಪೆ ಬೀಜಗಳನ್ನು ಅಸಲಿ ಕಂಪನಿಗಳ ಹೆಸರಿನಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಅರಿಯದ ರೈತರು ಮಾರಾಟಗಾರರು ಹೇಳಿದಷ್ಟು ಹಣ ಕೊಟ್ಟು ಬೀಜ ಖರೀದಿಸಿ ಬಿತ್ತನೆ ಮಾಡುತ್ತಿದ್ದಾರೆ. ಬಳಿಕ ಸಲು ಬಾರದೇ ನಷ್ಟ ಅನುಭವಿಸುತ್ತಿದ್ದಾರೆ.

ಮಾರಾಟಗಾರರಿಂದಲೇ ಬೀಜೋತ್ಪಾದನೆ: ಸ್ಥಳೀಯ ಮಾರಾಟಗಾರರು ಹೆಚ್ಚಿನ ಲಾಭದಾಸೆಗಾಗಿ ನಿಯಮ ಬಾಹಿರವಾಗಿ ಕೃಷಿ ಇಲಾಖೆಯ ಗಮನಕ್ಕೂ ತರದೇ ಬೀಜೋತ್ಪಾದನೆ ಮಾಡುತ್ತಿದ್ದಾರೆ. ನಿಯಮದ ಪ್ರಕಾರ ರೈತರು ಬೀಜ ಬೆಳೆದ ಬಳಿಕ ಅವುಗಳನ್ನು ಸಂಸ್ಕರಣೆ ಮಾಡಿ, ಗುಣಮಟ್ಟದ ಬೀಜ (ಬಿತ್ತನೆಗೆ ಯೋಗ್ಯ) ಹಾಗೂ ತಿರಸ್ಕೃತ ಬೀಜ (ಯೋಗ್ಯವಲ್ಲದ) ಎಂದು ಬೇರ್ಪಡಿಸಿ ಬಳಿಕ ತಿರಸ್ಕೃತ ಬೀಜ ನಾಶಪಡಿಸಬೇಕು. ಆದರೆ, ಲಾಭದಾಸೆಗಾಗಿ ಮಾರಾಟಗಾರರು ಈ ಯಾವ ನಿಯಮವನ್ನೂ ಪಾಲಿಸುತ್ತಿಲ್ಲ ಎಂದು ಜಿಲ್ಲೆಯ ರೈತರು ಆರೋಪಿಸಿದ್ದಾರೆ.

ಅಸಲಿ ಕಂಪನಿ ಹೆಸರಲ್ಲಿ ತಿರಸ್ಕೃತ ಬೀಜ ಮಾರಾಟ

ಕಳೆದ ವರ್ಷ ನೆರೆ ಹಾವಳಿ ಹಾಗೂ ಈ ವರ್ಷ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೀಜೋತ್ಪಾದನೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಪ್ರಸಕ್ತ ಸಾಲಿನ ಬಿತ್ತನೆಗೆ ಸುಮಾರು 65,750 ಕ್ವಿಂಟಾಲ್ ಬೀಜ ಸಂಗ್ರಹಿಸಬೇಕಾಗಿದೆ. ಇದನ್ನರಿತ ಕೆಲ ಕಂಪನಿಗಳ ಸಿಬ್ಬಂದಿ ಹಾಗೂ ಸ್ಥಳೀಯ ಕೆಲ ವ್ಯಾಪಾರಸ್ಥರು ರೈತರಿಗೆ ವಂಚಿಸತೊಡಗಿದ್ದಾರೆ. ಮಹಾರಾಷ್ಟ್ರದ ಬೀಜೋತ್ಪಾದನಾ ಕಂಪನಿಗಳ ತಿರಸ್ಕೃತ ಬೀಜಗಳನ್ನು (ಬಿತ್ತನೆಗೆ ಯೋಗ್ಯವಲ್ಲದ ಬೀಜ) ಕಡಿಮೆ ಬೆಲೆಗೆ ಖರೀದಿಸಿ ತಂದು ಅವುಗಳಿಗೆ ಬಣ್ಣ ಸೇರಿಸಿ, ವಿವಿಧ ಕಂಪನಿಗಳ ನಕಲಿ ಪ್ಯಾಕೆಟ್‌ಗಳಲ್ಲಿ ಹಾಕಿ ಬೆಳಗಾವಿ ಜಿಲ್ಲೆಯಾದ್ಯಂತ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಬೀಜ ಕಂಪನಿಗಳ ಹೆಸರೂ ಕೆಡುತ್ತಲಿದೆ.

ಗುಣಮಟ್ಟದೆಂದು ತಿಳಿದು ಹಾಗಲಬೀಜ ತಂದು ಎರಡು ಎಕರೆಯಲ್ಲಿ ಬಿತ್ತನೆ ಮಾಡಿದ್ದೆ. ಆರಂಭದಲ್ಲಿ ಬೆಳೆ ಚೆನ್ನಾಗಿಯೇ ಇತ್ತು. ಆದರೆ, ಬಿತ್ತನೆ ಮಾಡಿದ್ದು ಕಳಪೆ ಬೀಜವಾಗಿದ್ದರಿಂದ ಹೂವು ಮತ್ತು ಮಿಡಿ ಕಟ್ಟುವಾಗಲೇ ಬೆಳೆ ರೋಗಬಾಧೆಗೆ ಒಳಗಾಯಿತು. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಹಾಗಲಕಾಯಿಯಿಂದ ಜೀವನವೇ ಕಹಿಯಾಯಿತು.| ನಾಗರಾಜ ಹುಂಡೇಕಾರ ಹಾಗಲಕಾಯಿ ಬೆಳೆಗಾರ, ಘಟಪ್ರಭಾಕಳಪೆ ಬೀಜ ಮಾರಾಟ ನಿಯಂತ್ರಿಸಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯಾ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ಕಳೆದ ವರ್ಷ (2019) 10ಕ್ಕೂ ಹೆಚ್ಚು ನಕಲಿ ಬೀಜ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಕಲಿ ಬೀಜ ಮಾರಾಟ ಮಾಡುವ ಕಂಪನಿಯಿಂದಲೇ ಬೆಳೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ಕೊಡಿಸಲಾಗಿದೆ. ಈ ವರ್ಷ ಮಾರುಕಟ್ಟೆಗೆ ಹೊಸದಾಗಿ ಬಂದ 125 ವಿವಿಧ ಬಗೆಯ ಬೀಜಗಳ ಪರೀಕ್ಷೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. | ಜಿಲಾನಿ ಮೊಕಾಶಿ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಬೆಳಗಾವಿ

| ಅಕ್ಕಪ್ಪ ಮಗುದುಮ್ಮ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net