ಮೋದಿ ನಿಂದನೆಗೆ ಕರ್ನಾಟಕ ಜನತೆಯಿಂದ ತಕ್ಕ ಉತ್ತರ: ಏಕನಾಥ್ ಶಿಂಧೆ

udp-8-shindhe 1
Published on

ಉಡುಪಿ: ಅಭಿವೃದ್ದಿ ಈ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಆದರೆ ಕಾಂಗ್ರೆಸಿಗರು ಮೋದಿಜಿ ಅವರ ಬಗ್ಗೆ ಕರ್ನಾಟಕದಲ್ಲಿ ವಿಷ ಸರ್ಪ, ಗುಜರಾತ್‌ನಲ್ಲಿ ಮೌತ್ ಕಾ ಸೌದಾಗರ್ ಮೊದಲಾದ ಅಪಶಬ್ದಗಳನ್ನು ವ್ಯಂಗ್ಯವಾಡುತ್ತಿದ್ದಾರೆ. ಆದರೆ ಈ ಬಗ್ಗೆ ಮೋದಿಯವರು ಮೌನವಾಗಿದ್ದಾರೆ. ಮೇ ೧೦ ರಂದು ಕರ್ನಾಟಕದ ಜನತೆ ಸೇಡು ತೀರಿಸಿಕೊಂಡು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜರಂಗದಳ ಒಂದು ದೇಶಭಕ್ತ ಸಂಘಟನೆಯಾಗಿದ್ದು, ರಾಷ್ಟ್ರಕ್ಕೆ ಸಂಕಟ ಬಂದಾಗ ತಮ್ಮ ಪ್ರಾಣ ಒತ್ತೆಗಿಟ್ಟು ಕೆಲಸ ಮಾಡುತ್ತಾರೆ. ಇಂಥ ಸಂಘಟನೆಯನ್ನು ಕಾಂಗ್ರೆಸ್ ಹೇಗೆ ಬ್ಯಾನ್ ಮಾಡುತ್ತದೆ? ಭಜರಂಗಿ ಹಾಗೂ ಮೋದಿಯವರಿಗೆ ಮಾಡಿದ ಅವಮಾನಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಇದು ಕೇವಲ ಕರ್ನಾಟಕ ಚುನಾವಣೆ ಅಲ್ಲ. ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಬದಲಾಗಿ ದೇಶದ ಚುನಾವಣೆಯಾಗಿದೆ. ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕ ವ್ಯವಸ್ಥೆ ೧೧ನೇ ಸ್ಥಾನದಿಂದ ೫ನೇ ಸ್ಥಾನಕ್ಕೆ ಏರಿಕೆಯಾಗಿದೆ. ಕೋವಿಡ್‌ನಿಂದ ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಹದಗಟ್ಟಿದೆ. ಆದರೆ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಜಿ.೨೦ ಅಧ್ಯಕ್ಷತೆ ನಮ್ಮ ದೇಶಕ್ಕೆ ಸಿಕ್ಕಿರುವುದು ಗೌರವದ ವಿಚಾರ. ಇದೆಲ್ಲದಕ್ಕೆ ಮೋದಿಯವರ ನಾಯಕತ್ವ ಕಾರಣ. ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ. ಮಹಾರಾಷ್ಟ್ರದಲ್ಲಿ ೮ ತಿಂಗಳ ಅಧಿಕಾರವಧಿಯಲ್ಲಿ ಅಭಿವೃದ್ಧಿ ಮತ್ತೆ ಸಹಜವಾಗಿದೆ. ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ ಎಂದರು.

ಕರಾವಳಿ ಜನ್ಮಭೂಮಿಯಾಗಿದ್ದರೂ, ಇಲ್ಲಿನ ಅನೇಕ ಜನರ ಕರ್ಮಭೂಮಿ ಮಹಾರಾಷ್ಟ್ರವಾಗಿದೆ. ಮುಂಬೈ, ಥಾಣೆ ನಗರಗಳಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅಲ್ಲಿಯವರು ಬಿಜೆಪಿ-ಶಿವಸೇನೆ ಬೆಂಬಲಿಸುತ್ತಾ ಬಂದಿದ್ದಾರೆ. ಮಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ಅನೇಕ ಜನರಿದ್ದಾರೆ. ಬೆಂಗಳೂರಲ್ಲೂ ೧೪ ರಿಂದ ೧೫ ಮಹಾರಾಷ್ಟ್ರ ಮಂಡಲಗಳನ್ನು ಭೇಟಿಯಾಗಿದ್ದೇನೆ. ಕರಾವಳಿ ಭಾಗದಲ್ಲಿ ಅನೇಕ ಮಂದಿ ಮಹಾರಾಷ್ಟ್ರ ಮೂಲದ ಜನರು ನೆಲೆಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲಕರ ಸ್ಥಿತಿಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net