

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕಿನ ಸಮಸ್ತ ಭಕ್ತ ವರ್ಗ, ಎಲ್ಲ ಸಂಘಟನೆಗಳ ಸಹಭಾಗಿತ್ವದಲ್ಲಿ ಸೆ.28ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ, ಅಮೃತವರ್ಷಿಣಿ ಸಭಾಭವನ ಬಳಿ ನಡೆಯಲಿರುವ ಮಹಾಚಂಡಿಕಾಯಾಗದಲ್ಲಿ ಭಾಗವಹಿಸುವಂತೆ ಎಸ್‌ಡಿಎಂ ಐಟಿ ವಿಭಾಗದ ಸಿಇಒ ಪೂರನ್ ವರ್ಮ ಹೇಳಿದರು.
ಉಜಿರೆಯಲ್ಲಿ ತಾಲೂಕಿನ ಎಲ್ಲ ಸಂಘಟನೆಗಳು ಹಾಗೂ ಭಕ್ತವರ್ಗದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕಿನ ಎಲ್ಲ ಭಕ್ತರು ಶ್ರೀ ಕ್ಷೇತ್ರದ ಮುಖ್ಯದ್ವಾರದಿಂದ ಬೆಳಗ್ಗೆ 10ಕ್ಕೆ ಕ್ಷೇತ್ರಕ್ಕೆ ತೆರಳಿ ಪ್ರಾರ್ಥಿಸಿ, ಬಳಿಕ ಮಹಾ ಚಂಡಿಕಾಯಾಗದ ಪೂರ್ಣಾಹುತಿ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಚನದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಸೆ.21ರಂದು ಮಧ್ಯಾಹ್ನ ಅಮೃತ ವರ್ಷಿಣಿ ಸಭಾಭವನದಲ್ಲಿ ಎಸ್‌ಡಿಎಂ ಕಾಲೇಜಿನ ಎಲ್ಲ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಲಿದೆ ಎಂದರು.
ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ತಾಲೂಕಿನ ಜನರು ಧರ್ಮಸ್ಥಳ ಕುಟುಂಬದ ಸದಸ್ಯರು. ಶ್ರೀ ಕ್ಷೇತ್ರ ಧರ್ಮಸ್ಥಳ ದೇವರ ಕೋಣೆಯಿದ್ದಂತೆ. ಕ್ಷೇತ್ರ ಹಾಗೂ ಯಜಮಾನನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ, ವ್ಯವಸ್ಥಿತ ಅಪಪ್ರಚಾರದ ವಿರುದ್ಧ ಮನೆ ಹಾಗೂ ಕುಟುಂಬದ ಸದಸ್ಯರು ಒಂದಾಗಿ ಭಕ್ತಿ, ಶ್ರದ್ಧೆಯಿಂದ ಪ್ರಾರ್ಥಿಸಿ, ಡಾ.ಹೆಗ್ಗಡೆಯವರ ಜತೆಗೆ ನಾವಿದ್ದೇವೆ ಎಂದು ಸಾರುವುದು ನಮ್ಮೆಲ್ಲರ ಕರ್ತವ್ಯ. ಒಳ್ಳೆಯ ಕೆಲಸದ ಜತೆಗೆ ನಾವಿದ್ದೇವೆ, ದುಷ್ಟ ಶಕ್ತಿಗಳನ್ನು ಒಳ್ಳೆಯ ಶಕ್ತಿಗಳಾಗಿ ಪರಿವರ್ತಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸುವ ಸಂದರ್ಭವಿದು. ಈಗಾಗಲೇ ಗ್ರಾಮ, ವಲಯ, ಬೂತ್ ಮಟ್ಟದಲ್ಲಿ ಸಮಾಲೋಚನೆ ನಡೆದಿದ್ದು, ತಾಲೂಕಿನ ಎಲ್ಲ ಸಂಘಟನೆಗಳು ಪಕ್ಷಭೇದ ಮರೆತು ಸಮಾವೇಶದಲ್ಲಿ ಭಾಗವಹಿಸಬೇಕು. ಸಮಾವೇಶದ ಕೊನೆಗೆ ಠರಾವು ಮಂಡಿಸಲಾಗುವುದು ಎಂದರು.
ಸಂಚಾಲಕ ಕೆ.ಮೋಹನ್ ಕುಮಾರ್ ಮಾತನಾಡಿ, ನವರಾತ್ರಿಯ ಪರ್ವಕಾಲದಲ್ಲಿ ನಡೆಯಲಿರುವ ಮಹಾಚಂಡಿಕಾ ಯಾಗದಲ್ಲಿ ತಾಲೂಕಿನ ಎಲ್ಲ ಭಕ್ತರು ಭಾಗವಹಿಸಿ, ಹಿರಿಯರ ಮಾರ್ಗದರ್ಶನ, ಪೂಜ್ಯರ ಆಶೀರ್ವಾದ ಪಡೆಯುವುದರಿಂದ ಕೆಲವೇ ದಿನಗಳಲ್ಲಿ ಸತ್ಯದರ್ಶನವಾಗಲಿದೆ. ಮುಖ್ಯದ್ವಾರದಲ್ಲಿ ಎಲ್ಲ ಭಕ್ತರು ಜತೆಯಾಗಿ ಯಾಗಕ್ಕೆ ಬೇಕಾದ ಸುವಸ್ತುಗಳನ್ನು ಚೆಂಡೆ, ವಾದ್ಯ ಮೇಳದ ಮೆರವಣಿಗೆಯಲ್ಲಿ ಕೊಂಡೊಯ್ದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಮಹಾ ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಬೇಕು. ಅಮೃತವರ್ಷಿಣಿ ಸಭಾಭವನದ ಸತ್ಯದರ್ಶನ ಸಮಾವೇಶದಲ್ಲಿ ಆಹ್ವಾನಿತ ಗಣ್ಯರಿಂದ ಉಪನ್ಯಾಸ ಹಾಗೂ ಡಾ.ಹೆಗ್ಗಡೆಯವರ ಆಶೀರ್ವಚನ ನಡೆಯಲಿದೆ ಎಂದರು.
ಶ್ಯಾಮಸುಂದರ ನಡ, ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು, ಕ್ಷೇತ್ರದ ಭಕ್ತ ವರ್ಗ, ವರ್ತಕರು, ಯೋಜನೆಯ ಕಾರ್ಯಕರ್ತರು, ವೈದ್ಯರು, ಮಹಿಳೆಯರು ಭಾಗವಹಿಸಿದ್ದರು. ಸೋಮಶೇಖರ ಶೆಟ್ಟಿ ಸ್ವಾಗತಿಸಿದರು. ರಾಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.