

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬಲಿಪಾಡ್ಯ ನಿಮಿತ್ತ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಸೋಮವಾರ ಮೂಲ ರಾಮದೇವರು ಹಾಗೂ ಶ್ರೀಮಠದ ಪ್ರತಿಮೆಗಳಿಗೆ ಮಹಾ ಅಭಿಷೇಕ ನೆರವೇರಿಸಿದರು.
ಶ್ರೀಮಠದ ಪರಂಪರೆಯಂತೆ ಮೂಲ ರಾಮದೇವರು ಮತ್ತು ಪ್ರತಿಮೆಗಳಿಗೆ ವರ್ಷದಲ್ಲಿ ಬಲಿಪಾಡ್ಯ ಮತ್ತು ಶ್ರೀರಾಮನವಮಿಯಂದು ಮಾತ್ರ ಮಹಾ ಅಭಿಷೇಕ ನೆರವೇರಿಸಲಾಗುತ್ತಿದ್ದು, ಪ್ರತಿಮೆಗಳಿಗೆ ಯಾವುದೇ ಅಲಂಕಾರ ನಡೆಸದೆ ಶ್ರೀಗಳು ಪೂಜೆ ಸಲ್ಲಿಸುತ್ತಾರೆ.
ಈ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಮತ್ತು ಶ್ರೀಮಠ ಸಿಬ್ಬಂದಿ ಉಪಸ್ಥಿತರಿದ್ದರು. ಮಂಗಳವಾರ ಶ್ರೀಗಳು ಪ್ರತಿಮೆಗಳಿಗೆ ಮರು ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.