

ಬೀರೂರು: ಬೀರೂರಿನ ಕರಗಲ್ ಬೀದಿಯಲ್ಲಿ ನೆಲೆಸಿರುವ ಗ್ರಾಮ ದೇವತೆ ಶ್ರೀಅಂತರಘಟ್ಟಮ್ಮ ದೇವಿ ವೈಭವದ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಶ್ರೀ ಅಂತರಘಟ್ಟಮ್ಮ ದೇವಿಯ ಹಬ್ಬ ದ ಹಿನ್ನಲೆಯಲ್ಲಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಬೆಳಗ್ಗೆ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಜರುಗಿದವು. ರಾತ್ರಿ ಅಮ್ಮನವರು ರಥ ಪ್ರವೇಶವಾದ ಕೂಡಲೇ ಹರಕೆ ಹೊತ್ತ ಮಹಿಳೆಯರು ಕುಂಭ ಹೊತ್ತು ಅಮ್ಮನವರಿಗೆ ಗುಗ್ಗಳ ಸೇವೆ ಸಲ್ಲಿಸಿದರು. ಮಂಗಳವಾರ ವಿಶೇಷ ಪೂಜೆ, ಮಕ್ಕಳಿಂದ ಬೇವಿನ ಸೀರೆ ಸೇವೆ ಸಲ್ಲಿಸಲಾಯಿತು.
ರಥವನ್ನು ದೇವಸ್ಥಾನ ಆವರಣದಲ್ಲಿ ರಥ ಎಳೆದ ಕೂಡಲೇ ಮಂಗಳಾರತಿ ಸಲ್ಲಿಸಲಾಯಿತು. ಮೆರವಣಿಗೆ ಹಳೇಪೇಟೆಯ ಆಂಜನೇಯ ದೇವಸ್ಥಾನ ಬರುವ ವೇಳೆಗೆ ನಿಧಾನವಾಗಿ ಆಗಮಿಸುತ್ತಿದ್ದ ಎತ್ತಿನ ಬಂಡಿಗಳನ್ನು ಮಹಾನವಮಿ ಬಯಲಿನ ಕಡೆಗೆ ಓಡಿಸಲಾಯಿತು. ಈ ಬಾರಿ 60 ಎತ್ತಿನ ಬಂಡಿಗಳು ಭಾಗವಹಿಸಿದ್ದವು. ಯುವತಿಯೊಬ್ಬಳು ಎತ್ತಿನ ಗಾಡಿ ಓಡಿಸಿದ್ದು ಎಲ್ಲರ ಗಮನ ಸೆಳೆಯಿತು.
ಜನ ಜಾನುವಾರುಗಳಿಗೆ ರೋಗ ಬಾರದಂತೆ ರಕ್ಷಿಸುವ ತಾಯಿಗೆ ಬಲಿ ನೀಡಿ ಸೋಮವಾರ ರಾತ್ರಿ ಅಮ್ಮನವರು ರಥ ಪ್ರವೇಶದ ನಂತರ ಬಲಿತೀರ್ಥ ಪಡೆದ ಭಕ್ತರು ಮನೆಗೆ ತೆರಳಿ ತಾವು ತಂದ ಹರಕೆಯ ಟಗರು ಹಾಗೂ ಕುರಿಗಳಿಗೆ ಪ್ರೋಕ್ಷಿಸಿ ಬಲಿ ನೀಡಿದರು. ಅದರಿಂದ ತಯಾರಿಸಿದ ಅಡುಗೆಯನ್ನು ಎಡೆ ಮಾಡಿ ನಂತರ ಮನೆಗೆ ಆಗಮಿಸಿದ ನೆಂಟರು, ಬಂಧುಗಳಿಗೆ ಬಡಿಸಿ ಸಂತಸಪಟ್ಟರು. ಬುಧವಾರ ಅಮ್ಮನವರಿಗೆ ಓಕಳಿ ಸೇವೆ ಹಾಗೂ ರಾಜಬೀದಿಗಳ ಉತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.
ಅಮ್ಮನ ಮೂಲಸ್ಥಾನವಾದ ಕಡೂರು ತಾಲೂಕು ಗಡಿ ಗ್ರಾಮ ಅಂತರಘಟ್ಟೆಯಲ್ಲಿ ಶುಕ್ರವಾರ ನಡೆಯುವ ಅಂತಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ತೆರಳಲು ಸಿದ್ದತೆ ನಡೆಸಲಾಗುತ್ತಿದೆ.