

ಜಮಖಂಡಿ: ತಾಲೂಕಿನ ಮೂಗುರು ಗ್ರಾಮದಲ್ಲಿ ನಾಗರಪಂಚಮಿಯಂದು ಶಿವಾನಂದ ಶ್ರೀಗಳ ಜನ್ಮದಿನ ನಿಮಿತ್ತ ಶಿವಾನಂದ ಮಠದ ಗುರುಪ್ರಸಾದ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮದ ಯುವಕರು ಕೃಷ್ಣಾ ನದಿಯಲ್ಲಿ ತೆಪ್ಪದ ರಥೋತ್ಸವ ಆಚರಿಸಿ ಸಂಭ್ರಮಿಸಿದರು.
ಶ್ರೀಮಠದಲ್ಲಿ ಪಲ್ಲಕ್ಕಿ ಅಲಂಕರಿಸಿ ಪೂಜೆ ಸಲ್ಲಿಸಿ ಸಕಲ ವಾದ್ಯಮೇಳದೊಂದಿಗೆ ಕೃಷ್ಣಾ ನದಿಯವರೆಗೆ ಪಲ್ಲಕ್ಕಿ ಉತ್ಸವ ನಡೆಸಿ, ನಂತರ ನದಿಯಲ್ಲಿನ ಬೋಟ್‌ನಲ್ಲಿ ತೆಪ್ಪದ ರಥೋತ್ಸವ ನಡೆಸಿ ಗಮನಸೆಳೆದರು.
ರಥದಲ್ಲಿ ಶಿವಾನಂದ ಶ್ರೀ, ಮಲ್ಲಿಕಾರ್ಜುನ ಶ್ರೀಗಳ ಭಾವಚಿತ್ರದೊಂದಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನದಿಯಿಂದ ಶ್ರೀಮಠದವರೆಗೆ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಗ್ರಾಮದ ಸುಮಂಗಲಿಯರು ದಾರಿಯುದ್ದಕ್ಕೂ ನೀರು ಹಾಕಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.
ಮೊದಲು ಬಾಳೆದಿಂಡಿನಿಂದ ತೆಪ್ಪ ತಯಾರಿಸಿ ತುಂಬಿ ಹರಿಯುವ ನದಿಯಲ್ಲಿ ರಥೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಕೆಲ ವರ್ಷಗಳ ಹಿಂದೆ ತೆಪ್ಪ ಹರಿದು ಸಮಸ್ಯೆ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಬೋಟ್‌ನಲ್ಲಿ ರಥೋತ್ಸವ ಆಚರಿಸುತ್ತಿದ್ದಾರೆ. ಹಿಂದಿನ ಸಂಪ್ರದಾಯದಂತೆ ರಥೋತ್ಸವ ಮುಂದುವರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗುರುಪ್ರಸಾದ ಸ್ವಾಮೀಜಿ.
ತೆಪ್ಪದ ರಥೋತ್ಸವದಲ್ಲಿ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ, ಗ್ರಾಮದ ಪ್ರಮುಖರಾದ ಮಲ್ಲು ಪಾಟೀಲ, ರಾಜು ಆಜೂರ, ರಾಮಪ್ಪ ಅಂಬಿ, ಶ್ರೀಶೈಲ ಮಠಪತಿ, ಸುನೀಲ ಕಾರಜೋಳ, ಮಹಾಂತೇಶ ತೇಲಸಂಗ, ಮಳೆಪ್ಪ ಮಿರ್ಜಿ, ಗುರು ಪಾಟೀಲ, ಈರಗೊಂಡ ಭೀಮನಹಳ್ಳಿ, ಧರಣೇಂದ್ರ ನ್ಯಾಮಗೌಡ, ಅಪ್ಪಾಸಾಬ ಅಂಬಿ ಇತರರಿದ್ದರು.