

ಹಿರೀಸಾವೆ: ಹೋಬಳಿಯ ದಿಡಗ ಹಳೇ ಗ್ರಾಮದಲ್ಲಿ ಕಾರಹಬ್ಬದ ಪ್ರಯುಕ್ತ ಕರಿಗಲ್ಲಿಗೆ(ಶ್ರೀ ಬ್ರಹ್ಮದೇವರು) ವಿಶೇಷ ಪೂಜೆ ಹಾಗೂ ಜಾನುವಾರುಗಳ ಉತ್ಸವ ಶನಿವಾರ ಸಂಜೆ ವೈಭವದಿಂದ ಜರುಗಿತು.
ಕರಿಗಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸುವುದರಿಂದ ಕೃಷಿಯಲ್ಲಿ ಅಭಿವೃದ್ಧಿ, ಫಸಲಿನಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭ ಮತ್ತು ಜಾನುವಾರುಗಳಲ್ಲಿ ಆರೋಗ್ಯ ವೃದ್ಧಿಯಾಗಲಿದೆ ಎಂಬುದು ಗ್ರಾಮದ ಜನತೆಯ ಬಲವಾದ ನಂಬಿಕೆಯಾಗಿದೆ. ಜತೆಗೆ ವರ್ಷದಲ್ಲಿ ಒಮ್ಮೆ ಮಾತ್ರ ಕಾರಹಬ್ಬದ ದಿನದಂದು ಶ್ರೀ ಬ್ರಹ್ಮದೇವನಿಗೆ(ಕರಿಗಲ್ಲಿಗೆ) ಪೂಜೆ ನಡೆಯುವುದು ವಿಶೇಷ.
ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಜಾನುವಾರುಗಳ ಮೈ ತೊಳೆದು, ಕೊಂಬುಗಳಿಗೆ ವಿವಿಧ ಬಣ್ಣ ಹಚ್ಚಿ, ಬಲೂನ್ ಹಾಗೂ ಸುನಾರಿ-ಮಿಂಚುಗಳಿಂದ ಸಿಂಗರಿಸಲಾಗಿತ್ತು. ಕುತ್ತಿಗೆಗೆ ಗೆಜ್ಜೆಹಾರ, ಈಚಲ ಹಾರ ಹಾಗೂ ಕಾಲಿಗೆ ಕರಿದಾರ ಕಟ್ಟಲಾಗಿತ್ತು.
ಜಾನುವಾರುಗಳ ಪಾದಪೂಜೆ: ಸಿಂಗಾರಗೊಂಡಿದ್ದ ಜಾನುವಾರುಗಳನ್ನು ಸಂಜೆ ಮನೆ ಬಾಗಿಲಲ್ಲಿ ನಿಲ್ಲಿಸಿ ಮುಖ ತೊಳೆದು ಹಣೆಗೆ ಕುಂಕುಮವಿಟ್ಟು ಹೂ ಮುಡಿಸಲಾಯಿತು. ಜಾನುವಾರುಗಳಿಗೆ ಪೂಜೆ ಮಾಡಿದ ಮುತ್ತೈದೆಯರು ತಮ್ಮ ಮಾಂಗಲ್ಯವನ್ನು ಜಾನುವಾರುಗಳ ಪಾದಕ್ಕೆ ಸ್ಪರ್ಶಿಸಿ, ಹಣೆಗೆ ಹೊತ್ತಿಸಿಕೊಂಡು ಮಾಂಗಲ್ಯ ಭಾಗ್ಯ ಗಟ್ಟಿಗೊಳಿಸುವಂತೆ ಬೇಡಿಕೊಂಡರು.
ಬಳಿಕ ರೈತರು ತಮ್ಮ ಜಾನುವಾರುಗಳೊಂದಿಗೆ ಶ್ರೀ ಬಾಣೇಶ್ವರ ದೇಗುಲದ ಬಳಿ ಒಟ್ಟಾಗಿ ಸೇರಿದರು. ಅರ್ಚಕ ರಾಮಚಂದ್ರಯ್ಯ ಕರಿಗಲ್ಲಿಗೆ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜಾನುವಾರುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಿದರು.
ನಂತರ ಸಂಪ್ರದಾಯದಂತೆ ಶ್ರೀ ಬಾಣೇಶ್ವರ ದೇಗುಲದಿಂದ ಜಾನುವಾರುಗಳ ಉತ್ಸವ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಾರಿಕಾಂಬ ದೇವಿ ಸನ್ನಿಧಿ, ಶ್ರೀ ಚನ್ನಕೇಶವ ದೇಗುಲವನ್ನು ಪ್ರದಕ್ಷಣೆ ಹಾಕಿಕೊಂಡು ಬಂದು ಹೆಬ್ಬಾಗಿಲ ಬಳಿ ಉತ್ಸವ ಅಂತಿಮಗೊಂಡಿತು. ಹೆಬ್ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೆಬ್ಬಾಗಿಲಿಗೆ ಕಟ್ಟಿರುವ ದಂಡೆಯನ್ನು (ತೋರಣ) ಕೀಳುವ ಮೂಲಕ ಕಾರಹಬ್ಬಕ್ಕೆ ತೆರೆ ಬಿದ್ದಿತು.
ಕ್ಷೀಣಿಸುತ್ತಿರುವ ನಾಟಿ ಜಾನುವಾರುಗಳು: ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಹೆಚ್ಚಿನ ಬಳಕೆ ಹಾಗೂ ರೈತರು ಹೈನುಗಾರಿಕೆಯತ್ತ ಮುಖ ಮಾಡಿರುವ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ನಾಟಿ ಜಾನುವಾರುಗಳ ಸಂತತಿ ಕ್ಷೀಣಿಸುತ್ತಿದೆ. ಪರಿಣಾಮ ಹಳ್ಳಿಯ ಸೊಗಡು ಹಾಗೂ ಪುರಾತನ ಕಾರಹಬ್ಬವು ದಿನ ಕಳೆದಂತೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.
ಜಾನುವಾರು ಹಾಗೂ ನೇಗಿಲು-ಮುಟ್ಟುಗಳನ್ನು ತೊಳೆದು ಕೆಮ್ಮಣ್ಣು ಪಟ್ಟೆ ಹಾಗೂ ಬ್ಯಾಟೆಸೊಪ್ಪಿನಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುವ ಪುರಾತನ ಹಬ್ಬ ಇದಾಗಿದ್ದು 300 ವರ್ಷಗಳಿಗೂ ಮೀರಿದ ಇತಿಹಾಸವಿದೆ ಎಂದು ಗ್ರಾಮದ ಹಿರಿಯರು ತಿಳಿಸಿದರು.