

ಬೆಂಗಳೂರು: ಕೋವಿಡ್ ಕಾರಣದಿಂದ ಮಕ್ಕಳನ್ನು ಮನೆಯಲ್ಲಿ ಹಿಡಿದಿಟ್ಟುಕೊಳ್ಳೊದು ಪೋಷಕರಿಗೆ ದೊಡ್ಡ ಸವಾಲು. ಪುಟ್ಟ ಮಕ್ಕಳಾದರೆ ಅವರ ಮುಂದೆ ಒಂದಷ್ಟು ಆಟಿಕೆ ಹಾಕಿ ಬಿಡುವುದು ಸಾಮಾನ್ಯ. ಇಂಥದ್ದೇ ಒಂದು ಪ್ರಸಂಗದಲ್ಲಿ ನಾಲ್ಕುವರ್ಷದ ಬಾಲಕಿ ತನಗೆ ಅರಿವಿಲ್ಲದೇ 9 ಮ್ಯಾಗ್ನೆಟ್ ಗುಂಡು, ಲಿಥಿಯಂ ಬ್ಯಾಟರಿ ನುಂಗಿದ್ದಾಳೆ. ಆದರೆ ಇದು ಪಾಲಕರಿಗೆ ತಿಳಿದಿದ್ದು ಆಕೆ ಹೊಟ್ಟೆ ನೋವು ಎಂದು ಹೇಳಲು ಆರಂಭಿಸಿದಾಗ. ಹಾಗೆಯೇ ಮಲ ವಿಸರ್ಜನೆಯ ವೇಳೆ ರಕ್ತ ಕಂಡು ಬಂದಾಗ...!
ಈ ಅಸಹಜ ಲಕ್ಷಣದಿಂದ ಗಾಬರಿಯಾದ ಪಾಲಕರು ಕೂಡಲೇ ಮಗುವನ್ನ ಬೆಂಗಳೂರಿನ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೂ ಈ ಪ್ರಕರಣ ಆಘಾತ ಮೂಡಿಸಿತ್ತು. ಆಸ್ಪತ್ರೆಯ ಮಕ್ಕಳ ಮೂತ್ರಕೋಶ ತಜ್ಞ ಡಾ. ಅಂಟೋನಿ ರಾಬರ್ಟ್ ಚಾರ್ಲ್ಸ್, ಮಗುವನ್ನು ಎಕ್ಸ್-ರೇಗೆ ಒಳಪಡಿಸಿದಾಗ ಕರುಳಿನಲ್ಲಿ 9 ಸಣ್ಣ ಮ್ಯಾಗ್ನೆಟ್ ಗುಂಡುಗಳು ಹಾಗೂ ಲೀಥಿಯಂ ಅಯಾನ್ ಬ್ಯಾಟರಿ ಸೇರಿಕೊಂಡಿದ್ದು ಕಾಣಿಸಿದೆ. ವೈದ್ಯರು ಎಕ್ಸ್ ರೇ ಮಾಡಿ ಅದನ್ನ ತೋರಿಸುವವರೆಗೂ ಪಾಲಕರಿಗೂ ಕೂಡ ಮಗುವಿನ ಹೊಟ್ಟೆಯಲ್ಲಿ ಏನಿದೆ, ಅವಳು ಏನೆಲ್ಲ ನುಂಗಿದ್ದಾಳೆ ಎಂಬುದರ ಕಲ್ಪನೆಯೇ ಇರಲಿಲ್ಲ.
ಪ್ರಕರಣ ಅದೆಷ್ಟು ಗಂಭೀರವಾಗಿತ್ತೆಂದರೆ ಬಾಲಕಿ ಇಷ್ಟನ್ನೆಲ್ಲಾ ನುಂಗಿದ ಎರಡು ದಿನಗಳ ನಂತರ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅದಾಗಲೇ ಹೊಟ್ಟೆಯೊಳಗೆ ಈ ವಸ್ತುಗಳು ಸಾಕಷ್ಟು ಹಾನಿ ಮಾಡಿದ್ದವು. ಬ್ಯಾಟರಿ ಹೊಟ್ಟೆಯ ಒಳಭಾಗವನ್ನು ಸುಟ್ಟ ಕಾರಣ ಕರುಳಿನ ಗೋಡೆಗೆ ಎರಡು ಕಡೆಗಳಲ್ಲಿ ಹಾನಿಯಾಗಿತ್ತು. ಹಾಗೆಯೇ ಮ್ಯಾಗ್ನೆಟ್ಸ್ ಅಲ್ಲಲ್ಲಿ ರಂಧ್ರಗಳನ್ನ ಕೂಡ ಕೊರೆದಿದ್ದವು ಎಂದು ಘಟನೆಯ ವಿವರಗಳನ್ನ ವೈದ್ಯರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಮೊದಲು ವೈದ್ಯರು ಈ ವಸ್ತುಗಳನ್ನ ಎಂಡೋಸ್ಕೊಪಿ ಮತ್ತು ಕೊಲೊನೋಸ್ಕೊಪಿ ಮೂಲಕ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ತದನಂತರದಲ್ಲಿ ಸತತ ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯನ್ನ ಕೈಗೊಂಡು ಕೊನೆಗೂ ಬ್ಯಾಟರಿ ಮತ್ತು ಮ್ಯಾಗ್ನೆಟ್ ಗುಂಡುಗಳನ್ನ ಹೊರತೆಗೆದಿದ್ದಾರೆ. ಮಕ್ಕಳನ್ನು ಒಂಟಿಯಾಗಿ ಬಿಡುವ ಮುನ್ನ ಎಚ್ಚರವಿರಲಿ ಎಂಬ ಕಿವಿಮಾತನ್ನೂ ಅವರು ಹೇಳಿದ್ದಾರೆ.