ಶ್ರೀರಂಗಪಟ್ಟಣದಲ್ಲಿ ಮಾಘ ಶುದ್ಧ ಹುಣ್ಣಿಮೆ

09_02_Srp_01
Published on

ಶ್ರೀರಂಗಪಟ್ಟಣ: ಪಟ್ಟಣದ ಗಂಜಾಂನ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಮಾಘ ಶುದ್ಧ ಹುಣ್ಣಿಮೆ(ಉತ್ತರಾಯಣ, ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ಪೌರ್ಣಮಿ) ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಿತು.

ಭಾನುವಾರ ಬೆಳಗಿನ ಜಾವ 1 ಗಂಟೆಯಿಂದಲೇ ಪೂಜೆ, ಪುನಸ್ಕಾರ ಪ್ರಾರಂಭವಾದವು. ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ, ಗಣಹೋಮ, ನಕ್ಷತ್ರಹೋಮ, ದುರ್ಗಾಹೋಮ ಹಾಗೂ ಸತ್ಯನಾರಾಯಣಸ್ವಾಮಿ ಪೂಜೆ, ಲೋಕಕಲ್ಯಾಣಾರ್ಥವಾಗಿ ಪೂಜಾ ಕೈಂಕರ್ಯ ಮಾಡಲಾಯಿತು. ನಿಮಿಷಾಂಬ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಅಂತೆಯೇ, ದೇವರಿಗೂ ವಿವಿಧ ಅಲಂಕಾರ ಮಾಡಲಾಗಿತ್ತು.

ಮಂಡ್ಯ ಸೇರಿದಂತೆ ಹೊರಜಿಲ್ಲೆ ಹಾಗೂ ರಾಜ್ಯದಿಂದ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಮಧ್ಯರಾತ್ರಿಯಿಂದಲೇ ಆಗಮಿಸಿ ಕಾವೇರಿ ನದಿಯಲ್ಲಿ ಮಾಘ ಸ್ನಾನ ಮಾಡಿ ಕಾವೇರಿಗೆ ಆರತಿ ಬೆಳಗಿ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಾನುವಾರ ರಜೆಯಿದ್ದ ಹಿನ್ನೆಲೆಯಲ್ಲಿ ಅಸಂಖ್ಯಾತ ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಪ್ರಸಾದ ಸೇರಿದಂತೆ ಲಾಡು ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರಿಗೆ ಮೂಲ ಸೌಕರ್ಯದ ವ್ಯವಸ್ಥೆ ಮಾಡಲಾಗಿತ್ತು. ಸ್ನಾನಕ್ಕೆ ಸ್ನಾನಘಟದ ಬಳಿ ನದಿಗೆ ಪ್ರತ್ಯೇಕ ನಾಲೆ ವ್ಯವಸ್ಥೆ ಮಾಡಲಾಗಿತ್ತು. ಅಂತೆಯೇ, ತಾತ್ಕಾಲಿಕ ಪ್ರತ್ಯೇಕ ಸ್ನಾನದ ಗೃಹ, ಶೌಚಗೃಹ ತೆರೆಯಲಾಗಿತ್ತು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸ ಲಾಗಿತ್ತು. ದೇವಸ್ಥಾನದಿಂದ ಸುಮಾರು 2 ಕಿ.ಮೀ ಹಿಂದೆಯೇ ಬ್ಯಾರಿಕೆಡ್ ಹಾಕಿ ಪ್ರತ್ಯೇಕವಾಗಿ ಎರಡು ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನು ಶನಿವಾರ ರಾತ್ರಿಯಿಂದಲೇ ದೇವಸ್ಥಾನದ ಹೊರಾಂಗಣದಲ್ಲಿ ವಿವಿಧ ಕಲಾತಂಡಗಳು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಭಕ್ತರಿಗೆ ಮುದನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net