

ದಾವಣಗೆರೆ: ಕೇಂದ್ರ ಸರ್ಕಾರವು ಪಿ.ಎಂ.ಶ್ರೀ ಶಾಲೆಗಳು ಎಂಬ ಹೊಸ ಕೇಂದ್ರ ಪುರಸ್ಕೃತ ಯೋಜನೆ ಜಾರಿಗೆ ತಂದಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ 7 ಶಾಲೆಗಳ ಅಭಿವೃದ್ಧಿಗೆ ತಲಾ 53 ಲಕ್ಷ ರೂ.ನಂತೆ ಒಟ್ಟು 3.71 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಬೆನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿರಡೋಣಿ ಶಾಲೆ, ದೊಗ್ಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆಬಾತಿ ಗುಡ್ಡದ ಕ್ಯಾಂಪ್ ಶಾಲೆ, ಸುರಹೊನ್ನೆ ಶಾಲೆ, ತಮಲೇಹಳ್ಳಿ ಹಾಗೂ ರಾಮಘಟ್ಟ ಶಾಲೆಗಳು ಯೋಜನೆಯಡಿ ಆಯ್ಕೆಯಾಗಿವೆ.
ಆಯ್ಕೆಗೊಂಡ ಶಾಲೆಗಳಲ್ಲಿ ಮೂಲಸೌಕರ್ಯ, ಬಾಲಕರ ಹಾಗೂ ಬಾಲಕಿಯರ ಶೌಚಗೃಹ, ಬೋಧನಾ ಸಿಬ್ಬಂದಿ ಮತ್ತು ಸಾಮರ್ಥ್ಯ ಅಭಿವೃದ್ಧಿ, ಪ್ರಧಾನಮಂತ್ರಿ ಪೋಷಣ್ ಅಭಿಯಾನ, ಕಲಿಕಾ ಫಲಕಗಳು, ಹಸಿರು ಉಪಕ್ರಮಗಳು ಹಾಗೂ ಇತರೆ ಚಟುವಟಿಕೆಗೆ ಅನುದಾನ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಯೋಜನೆಯು 2022-23ರಿಂದ 2026-27ನೇ ಸಾಲಿನವರೆಗೆ ಸುಮಾರು 14500 ಶಾಲೆಗಳನ್ನು ಮೂಲಭೂತವಾಗಿ ಬಲಪಡಿಸುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಸರ್ಕಾರ 27360 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಮೊದಲ ಹಂತದಲ್ಲಿ ರಾಜ್ಯದ 129 ಶಾಲೆಗಳು ಪಿ.ಎಂ.ಶ್ರೀ ಯೋಜನೆಯಡಿ ಆಯ್ಕೆಯಾಗಿವೆ.
ಕಳೆದ ಡಿಸೆಂಬರ್‌ನಲ್ಲಿ ಮೊದಲನೇ ಹಂತದಲ್ಲಿ ಶಾಲೆಗಳನ್ನು ಆಯ್ಕೆ ಮಾಡುವ ಸಲುವಾಗಿ ಚಾಲೆಂಚ್ ಮೆಥೆಡ್ ಮೂಲಕ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಆಯಾ ಶಾಲೆಗಳು ತಮ್ಮಲ್ಲಿರುವ ಮೂಲಸೌಕರ್ಯದ ವಿವರ, ಶೈಕ್ಷಣಿಕ ಸಾಮರ್ಥ್ಯ, ಶಿಕ್ಷಣದ ಗುಣಮಟ್ಟದ ವಿವರಗಳನ್ನು ಅಂತರ್ಜಾಲದಲ್ಲಿ ಮಾಹಿತಿ ನೀಡಿದ್ದರು.
ಪಿ.ಎಂ.ಶ್ರೀ ಶಾಲೆಗಳು ತಮ್ಮ ಪ್ರದೇಶಗಳ ಇತರೆ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನಾಯಕತ್ವ ಒದಗಿಸಬೇಕೆನ್ನುವ ಮೂಲ ಆಶಯ ಈ ಯೋಜನೆ ಹೊಂದಿದೆ. 2ನೇ ಹಂತದಲ್ಲಿ ಶಾಲೆಗಳನ್ನು ಆಯ್ಕೆ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು ಆಯಾ ಶಾಲೆಗಳವರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಉಪನಿರ್ದೇಶಕರ ಮೂಲಕ ಹೆಚ್ಚಿನ ಮಾಹಿತಿ ಪಡೆದು ಛಾಲೆಂಜ್ ಮೆಥೆಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.