ಮಾಗಡಿಯಲ್ಲಿ ಕರೊನಾ ತಡೆಗೆ ಮೃತ್ಯುಂಜಯ ಹೋಮ

23 RMN-MGD p1
Published on

ಮಾಗಡಿ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಪುತ್ರಿ ಕರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕರೊನಾ ಹರಡದಿರಲಿ ಎಂದು ಬಾಲಕೃಷ್ಣ ಅಭಿಮಾನಿಗಳು ಹೋಮ-ಹವನದ ಮೊರೆ ಹೋಗಿದ್ದಾರೆ.

ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಬಾಲಕೃಷ್ಣ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಧನ್ವಂತರಿ, ಮಹಾವಿಷ್ಣು, ನವಗ್ರಹ, ಮಹಾಮೃತ್ಯುಂಜಯ ಹೋಮ ನೆರವೇರಿಸಲಾಯಿತು.ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಜನತೆಯ ಆರೋಗ್ಯ ದೃಷ್ಟಿಯಿಂದ ಹಾಗೂ ಮಾಜಿ ಶಾಸಕರ ಪುತ್ರಿ ಸೋಂಕಿನಿಂದ ಮುಕ್ತಿಹೊಂದಲಿ ಎಂದು ಪ್ರಾರ್ಥಿಸಿ ರೋಗ ನಿವಾರಕ, ಕಷ್ಟಕಾಲದಲ್ಲಿ ತಾಲೂಕಿನ ಜನರನ್ನು ಕಾಪಾಡುವ ಸೋಮೇಶ್ವರ ದೇವರಿಗೆ ವಿವಿಧ ಪೂಜೆ ನೆರವೇರಿಸಲಾಗಿದೆ ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿರುವ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಎಲ್ಲ ವಿಘ್ನಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ತಾಲೂಕಿನ ಜನರಿಗೆ ಸೋಂಕು ತಗಲದೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುವು ಮಾಡಿಕೊಟ್ಟು, ಶಾಸಕರ ಪುತ್ರಿ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net