

ಮಾಗಡಿ: ಜನಸಂದಣಿ ನಿಯಂತ್ರಿಸಲು ತಾಲೂಕು ಆಡಳಿತ ಪಟ್ಟಣದ ತರಕಾರಿ ಮಾರುಕಟ್ಟೆಯನ್ನು ಕೆಂಪೇಗೌಡ ಕೋಟೆ ಮೈದಾನಕ್ಕೆ ಸೋಮವಾರ ಸ್ಥಳಾಂತರಿಸಿದೆ.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದರು. ಇದರಿಂದ ಜನಸಂದಣಿ ನಿಯಂತ್ರಿಸುವುದು ಪುರಸಭೆ, ಪೊಲೀಸ್ ಇಲಾಖೆಗೆ ತಲೆನೋವಾಗಿತ್ತು. ಹಾಗಾಗಿ ಕೆಂಪೇಗೌಡ ಬಯಲು ರಂಗಮಂದಿರ ಬಳಿ ಇದ್ದ ತರಕಾರಿ ಮಾರುಕಟ್ಟೆಯನ್ನು ಕೆಂಪೇಗೌಡ ಕೋಟೆ ಮೈದಾನಕ್ಕೆ ಸ್ಥಳಾಂತರಿಸಲು ತಹಸೀಲ್ದಾರ್, ಡಿವೈಎಸ್‌ಪಿ, ಮತ್ತು ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡರು.
ತರಕಾರಿ ಮಾರುಕಟ್ಟೆ ಸ್ಥಳಾಂತರಿಸುವ ಬಗ್ಗೆ ವಾರದೊಳಗೆ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಇತ್ತೀಚೆಗೆ ಶಾಸಕ ಎ.ಮಂಜುನಾಥ್ ತಿಳಿಸಿದ್ದರು. ಈ ನಿಟ್ಟಿನಲ್ಲಿ ಪುರಸಭೆ, ತಾಲೂಕು ಆಡಳಿತ ಮಾರುಕಟ್ಟೆಯನ್ನು ಸ್ಥಳಾಂತರಿಸಿದ್ದು, ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ಪೊಲೀಸ್ ಠಾಣೆ ಮುಂಭಾಗದ ರಸ್ತೆ, ಬಿಡಿಸಿಸಿ ಬ್ಯಾಂಕ್ ರಸ್ತೆ ಬದಿ, ಟಿಎಪಿಸಿಎಂಎಸ್ ಎದುರು ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಹಾಗಾಗಿ ಈ ಸ್ಥಳದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಅಂಗಡಿಗಳನ್ನು ಇಲ್ಲಿಂದ ಕೇಂಪೇಗೌಡ ಬಯಲು ಮಂದಿರ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಕೋಟೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಬೇಸತ್ತಿರುವ ವ್ಯಾಪಾರಿಗಳು, ಶೀಘ್ರ ಮಾರುಕಟ್ಟೆ ಕಾಮಗಾರಿ ಮುಗಿಸಿ ಶಾಶ್ವತವಾಗಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಪುರಸಭೆಗೆ ಮನವಿ ಮಾಡಿದ್ದಾರೆ.
ತಾಲೂಕು ಆಡಳಿತದ ವಿರುದ್ಧ ಆಕ್ರೋಶ: ಕೆಂಪೇಗೌಡ ಕೋಟೆ ಮೈದಾನಕ್ಕೆ ಮಾರುಕಟ್ಟೆ ಸ್ಥಳಾಂತರಿಸುವ ಮುನ್ನ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿ, ಸ್ಥಳಾಂತರಿಸುವ ಬಗ್ಗೆ ಜನರಿಗೆ ಮೊದಲೇ ತಿಳಿಸಿ ಕ್ರಮಕೈಗೊಂಡಿದ್ದರೆ ನಮ್ಮ ವಿರೋಧ ಇರುತ್ತಿರಲಿಲ್ಲ. ಅಧಿಕಾರಿಗಳು ಏಕಾಏಕಿ ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ತರಕಾರಿ ಮಾರಾಟಗಾರರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ಬದಿ ತರಕಾರಿ ಮಾರಾಟ ಮಾಡುವವರನ್ನು ತಾಲೂಕು ಆಡಳಿತ ಅನಾಥರಂತೆ ನೋಡುತ್ತಿದೆ. ಇನ್ನೆರಡು ತಿಂಗಳಲ್ಲಿ ಶಾಶ್ವತ ಮಾರುಕಟ್ಟೆ ನಿರ್ಮಿಸಿಕೊಡುವುದಾಗಿ ತಿಳಿಸಿ ನಮ್ಮನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಎಂಟು ತಿಂಗಳ ನಂತರ ಮತ್ತೆ ಅಂಗಡಿಗಳನ್ನು ಸ್ಥಳಾಂತರಿಸುವುದರಿಂದ ಬೇಸರವಾಗಿದೆ. ರಮೇಶ್, ತರಕಾರಿ ಮಾರಾಟಗಾರ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಕೆಂಪೇಗೌಡ ಕೋಟೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಮಾರುಕಟ್ಟೆ ನಿರ್ಮಾಣ ಕಾಮಗಾರಿ ಮುಗಿದ ನಂತರ ಶಾಶ್ವತವಾಗಿ ಅನುಕೂಲ ಕಲ್ಪಿಸಲಾಗುವುದು. ಭಾಗ್ಯಮ್ಮ, ಪುರಸಭೆ ಅಧ್ಯಕ್ಷೆ ಕೆಂಪೇಗೌಡ ಬಯಲು ರಂಗಮಂದಿರ ಬಳಿ ಜಾಗದ ಕೊರತೆ ಇದ್ದುದರಿಂದ ಜನಸಂದಣಿ ಉಂಟಾಗುತ್ತಿತ್ತು. ಕೆಂಪೇಗೌಡ ಕೋಟೆ ಮೈದಾನ ವಿಶಾಲವಾಗಿರುವುದರಿಂದ ತಾತ್ಕಾಲಿಕವಾಗಿ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ. ಎ.ಪಿ.ಕುಮಾರ್, ಸಿಪಿಐ