

ಪಟ್ಟಣದ ಬೆಂಗಳೂರು ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಹೊಸಪೇಟೆ ಗ್ರಾಮದ ತೀರಾ ಹಿಂದುಳಿದಿರುವ 9ನೇ (ಹಿಂದೆ 6ನೇ ವಾರ್ಡ್) ವಾರ್ಡ್ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆಯಾದರೂ ಮತ್ತಷ್ಟು ಅಭಿವೃದ್ಧಿ ನಿರೀಕ್ಷೆಯಲ್ಲಿದೆ.
ವಾರ್ಡ್ 1500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 1500 ಮತದಾರರಿದ್ದು, ಬಹುತೇಕ ಕಾರ್ಮಿಕರು. ಇವರಲ್ಲಿ ರೈತರು, ಕಾರ್ಮಿಕರು, ಅಡಕೆ ಚೇಣಿಗಾರರು, ಅಡಕೆ, ವೀಳ್ಯದೆಲೆ ಬೆಳೆಗಾರರು, ನೇಯ್ಗೆ ಕಾರ್ಮಿಕರಿದ್ದಾರೆ. ಪ್ರತಿನಿತ್ಯ ದುಡಿದು ಜೀವನದ ಬಂಡಿ ಸಾಗಿಸುವ ಇವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ವಾರ್ಡ್‌ನಲ್ಲಿ ಈ ಹಿಂದೆ ಇದ್ದ ಮಣ್ಣಿನ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿ ಬದಲಾಗಿವೆ. ಈ ರಸ್ತೆಯ ಎರಡು ಬದಿ ಚರಂಡಿ ನಿರ್ಮಿಸಿ ಸ್ಲ್ಯಾಬ್ ಅಳವಡಿಸಲಾಗಿದೆ. 2 ಕೊಳವೆ ಬಾವಿ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗಿದೆ. ಆದರೂ, ವಾರ್ಡ್‌ನಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಂತ ಮನೆಯಿಲ್ಲ. ಸ್ವಂತ ಸೂರು ಮಾಡಿಕೊಳ್ಳಲು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಪುರಸಭೆ ಕ್ರಮ ಕೈಗೊಂಡಿಲ್ಲ. ವಾರ್ಡ್‌ನ ಪೋಸ್ಟ್ ಮನೆ ಬೀದಿ, ಬಸವಣ್ಣ ದೇವಾಲಯ ಬೀದಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿದ್ದರೂ ನೀರಿನ ಸಮಸ್ಯೆಯಿಂದ ನಾಗರಿಕರು ಬಳಲುವಂತಾಗಿದೆ. 100ಕ್ಕೂ ಹೆಚ್ಚು ಮಂದಿಗೆ ಎಪಿಎಲ್, ಬಿಪಿಎಲ್ ಪಡಿತರ ಕಾರ್ಡ್ ಇಲ್ಲ. ಅಂಗವಿಕಲರಿಗೆ, ವೃದ್ಧರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಐಡಿಎಸ್‌ಎಂಟಿ ಲೇಔಟ್‌ನಲ್ಲಿ 1 ಕೋಟಿ ರೂ. ವೆಚ್ಚದ ಸ್ತ್ರೀಶಕ್ತಿ ಭವನ, 4 ಕೋಟಿ ರೂ. ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಾಮಗಾರಿ ಪೂರ್ಣಗೊಳಿಸಲು ಶಾಸಕರು ಮುಂದಾಗಬೇಕು ಎಂದು ವಾರ್ಡ್ ನಿವಾಸಿಗಳು ಮನವಿ ಮಾಡಿದ್ದಾರೆ.
ಸಿಸಿ ರಸ್ತೆ ಅಥವಾ ಡಾಂಬರೀಕರಣ ಮಾಡಿ
ಪುರಸಭೆಯ ಐಡಿಎಸ್‌ಎಂಟಿ ಲೌಔಟ್ ನಿರ್ಮಾಣವಾಗಿ ಸಾಕಷ್ಟು ವರ್ಷಗಳಾಗಿದೆ. ಇನ್ನೂ ಕೆಲವು ನಿವೇಶನಗಳನ್ನು ಹರಾಜು ಹಾಕಬೇಕಿದೆ. ಈಗಾಗಲೇ ಹರಾಜಾಗಿರುವ ಕೆಲವು ನಿವೇಶನ ಬಗ್ಗೆ ಪ್ರಕರಣ ಲೋಕಾಯುಕ್ತದಲ್ಲಿದೆ. ಉಳಿದ ನಿವೇಶನಗಳ ಹರಾಜು ಪ್ರಕ್ರಿಯೆಗೆ ಪುರಸಭೆ ಕ್ರಮ ಕೈಗೊಂಡು ಬಡಾವಣೆ ರಸ್ತೆಗಳಿಗೆ ಕಾಂಕ್ರಿಟ್ ಅಥವಾ ಡಾಂಬರೀಕರಣ ಮಾಡುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪುರಸಭೆ ವಾರ್ಡ್ 9 , ಸದಸ್ಯೆ: ಭಾಗ್ಯಮ್ಮ, ಮೊಬೈಲ್ ಸಂಖ್ಯೆ 9008880623
* ವಾರ್ಡ್ ವ್ಯಾಪ್ತಿ
ಐಡಿಎಸ್‌ಎಂಟಿ ಬಡಾವಣೆ, ಕ್ವಾಣಪುರಿ ಹಟ್ಟಿ, ಹನುಮಯ್ಯ ಲೇಔಟ್, ಬಿ.ಪಿ. ಮಂಜಣ್ಣ ಲೇಔಟ್
* ಜನಸಂಖ್ಯೆ: 1500ಕ್ಕೂ ಹೆಚ್ಚು
* ದೇವಾಲಯಗಳು
ಬಿಸಿಲು ಮಾರಮ್ಮನ ನೆಲೆ ದೇವರು ದೇವಾಲಯ, ಸಿಹಿ ನೀರು ಬಾವಿ, ಬಸವೇಶ್ವರ ದೇವಾಲಯ, ಮರಿಸ್ವಾಮಿ ದೇವಾಲಯ, ಕಲ್ಯಾಣಿ, ಬನ್ನಿ ಮಂಟಪ, ಸಾಯಿ ಗಣೇಶ ದೇವಾಲಯ, ಸರ್ಕಲ್ ವೀರಾಂಜನೇಯ, ಸುಬ್ರಮಣ್ಯ ದೇವಾಲಯಗಳು ಪ್ರಮುಖವಾಗಿವೆ.