

ಮಂಗಳೂರು: ಕಾವೂರಿನಲ್ಲಿ ನಿರ್ಮಿಸಲಾದ ಕೋಟ್ಯಾಂತರ ರೂ. ಮೌಲ್ಯದ ಮಾರುಕಟ್ಟೆಯ ಸಂಕೀರ್ಣ ಖಾಲಿ ಬಿದ್ದಿದ್ದು, ಅಂಗಡಿ ಪಡೆದ ವ್ಯಾಪಾರಸ್ಥರು ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.
ಶನಿವಾರ ಕಾವೂರಿನಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆ ಸಂಕೀರ್ಣವನ್ನು ಪರಿಶೀಲನೆ ನಡೆಸಿ, ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಮೀನು ಮಾರುಕಟ್ಟೆಗೆ ಅತ್ಯಾಧುನಿಕ ಸೌಲಭ್ಯಗಳನ್ನ ನೀಡಲಾಗಿದ್ದರೂ,ಕಾವೂರು ಜಂಕ್ಷನ್ ನಲ್ಲಿ ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವುದು ಸರಿಯಾದ ಕ್ರಮವಲ್ಲ. ಒಂದು ಬಾರಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರವಾದರೆ ಗ್ರಾಹಕರು ಕೂಡ ಖರೀದಿಗೆ ಖಂಡಿತ ಬರುತ್ತಾರೆ ಎಂದರು.
ರಸ್ತೆ ಬದಿ ವಾಹನದಲ್ಲಿ ಮೀನು ಮಾರಾಟ ಮಾಡುವುದನ್ನು ಕೂಡ ನಿಯಂತ್ರಣ ಮಾಡಲಾಗುವುದು. ಮಾರುಕಟ್ಟೆ ಸಂಕೀರ್ಣದಲ್ಲಿ ಯಾರೆಲ್ಲ ಅಂಗಡಿಯನ್ನು ಪಡೆದಿದ್ದಾರೆ ಅವರೆಲ್ಲ ಒಂದು ವಾರದ ಒಳಗಾಗಿ ಸ್ಥಳಾಂತರಗೊಳ್ಳಬೇಕು. ಈ ಕುರಿತು ನೋಟಿಸ್ ಜಾರಿ ಮಾಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವಧಿ ನೀಡಿದರು.
ಕಾವುರ್ ಜಂಕ್ಷನ್ ನಲ್ಲಿ ಹೊಸದಾಗಿ ಶೌಚಗೃಹ ನಿರ್ಮಾಣ ಮಾಡುವ ಕುರಿತಂತೆ ಯೋಜನೆ ರೂಪಿಸಲಾಗುವುದು. ಇದರ ಜೊತೆಗೆ ಬಸ್ ನಿಲ್ದಾಣ ಸಹಿತ ಅಗತ್ಯ ಸೌಕರ್ಯ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಅಮೀನ್, ಸದಸ್ಯೆ ಸುಮಂಗಳ ರಾವ್, ಬಿಜೆಪಿ ಮುಖಂಡ ರಣದೀಪ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಮಾರುಕಟ್ಟೆ ಅಂಗಡಿ ಮಳಿಗೆ ವಿವರ
ಹಸಿ ಮೀನು ಮಾರಾಟಕ್ಕೆ 12 ಕೌಂಟರ್, ಚಿಪ್ಪು ಮೀನು ಸ್ಟಾಲ್ 1, ಮೊಟ್ಟೆ ಅಂಗಡಿ 1, ಟೀ ಸ್ಟಾಲ್ 1, ಚಿಕನ್ ಸ್ಟಾಲ್ 1, ಒಣ ಮೀನು ಸ್ಟಾಲ್ 2, ಮಟನ್ ಸ್ಟಾಲ್ 2, ತರಕಾರಿ ಮಾರಾಟ ಅಂಗಡಿ 4, ಹೂವಿನ ಮಾರಾಟಕ್ಕೆ 2, ಹಣ್ಣು ಹಂಪಲು 1, ಕ್ಯಾಂಟೀನ್ 1 ಸೇರಿದಂತೆ ಒಟ್ಟು 42 ಅಂಗಡಿ ಕೋಣೆಗಳಿವೆ. ಈ ಪೈಕಿ 38 ಅಂಗಡಿ ಕೋಣೆಗಳನ್ನು ಇ ಟೆಂಡರ್ ಮೂಲಕ ಹಂಚಿಕೆಯಾಗಿದೆ. 4 ಅಂಗಡಿಗಳು ಬಾಕಿ ಉಳಿದಿವೆ. ಒಟ್ಟು 1.70 ಕೋಟಿ ರೂ. ಠೇವಣಿ ಬಿಡ್ಡುದಾರರಿಂದ ಸಂಗ್ರಹಿಸಲಾಗಿದೆ.