ಮದ್ಯಪಾನದಿಂದ ಕುಟುಂಬ ಬೀದಿಗೆ

0806 Chincholi 01
ಚಿಂಚೋಳಿ ಹೊರವಲಯದ ಬೊಮ್ಮನಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಮದ್ಯಪಾನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಶ್ರೀ ಕರುಣೇಶ್ವರ ಶಿವಾಚಾರ್ಯ ಮಾತನಾಡಿದರು. ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯ, ನಿವೃತ್ತ ನ್ಯಾಯಧೀಶ ಜಿ.ಕೆ.ಗೋಖಲೆ, ಅಶೋಕ ಪಾಟೀಲ್, ಶಿವಶರಣಪ್ಪ ಜಾಪಟ್ಟಿ, ವೀರಶೆಟ್ಟಿ ಇಮಡಾಪುರ, ಡಾ.ಕಿಶನರಾವ ಕಾಟಾಪುರ, ಕೆ.ಎಂ.ಬಾರಿ, ಮಾಣಿಕರಾವ ಗುಲಗುಂಜಿ, ಹಣಮಂತ ಪೂಜಾರಿ, ನಂದಿಕುಮಾರ ಪಾಟೀಲ್ ಇದ್ದರು.
Published on

ಚಿಂಚೋಳಿ: ಕ್ಷೇತ್ರದ ಪ್ರತಿ ಹಳ್ಳಿ, ತಾಂಡಾದಲ್ಲಿ ಅಕ್ರಮ ಮದ್ಯ ಸಿಗುತ್ತಿದೆ. ೧೬ರಿಂದ ೪೦ ವರ್ಷದೊಳಗಿನ ಪೀಳಿಗೆ ಮದ್ಯವ್ಯಸನಿಗಳಾಗಿ ಕುಟುಂಬವನ್ನು ಬೀದಿಗೆ ತಳ್ಳುತ್ತಿದ್ದಾರೆ. ಮಹಿಳೆಯರು, ಮಕ್ಕಳು, ಪಾಲಕರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಒಳಗಾಗುತ್ತಿದ್ದಾರೆ ಎಂದು ನಿಡಗುಂದಾ ಕಂಚಾಳಕುAಠಿ ನಂದೀಶ್ವರ ಮಠದ ಪೀಠಾಧಿಪತಿ ಶ್ರೀ ಕರುಣೇಶ್ವರ ಶಿವಾಚಾರ್ಯ ಆತಂಕ ವ್ಯಕ್ತಪಡಿಸಿದರು.

ಪಟ್ಟಣ ಹೊರವಲಯದ ಬೊಮ್ಮನಳ್ಳಿ ಶ್ರೀ ಮೌನೇಶ್ವರ ದೇವಾಲಯ ಆವರಣದಲ್ಲಿ ಅಖಿಲ ಭಾರತ ರೈತ ಸಂರಕ್ಷಣಾ ಸಮಿತಿ ಶನಿವಾರ ಆಯೋಜಿಸಿದ್ದ ಮದ್ಯಪಾನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಅವರು, ರೈತ ಸಂಘದ ಹೋರಾಟಕ್ಕೆ ಸ್ತ್ರೀಶಕ್ತಿ ಕೈಜೋಡಿಸಿದರೆ ಕ್ಷೇತ್ರ ಮದ್ಯಪಾನಮುಕ್ತ ಆಗಲಿದೆ ಎಂದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಂತೆ ಇದೀಗ ಮದ್ಯಪಾನ ಮುಕ್ತ ಗ್ಯಾರಂಟಿ ನೀಡುವ ಮೂಲಕ ಮಹಿಳೆಯರ ಮಾಂಗಲ್ಯ ಭಾಗ್ಯ ಗಟ್ಟಿಗೊಳಿಸಬೇಕು. ಸರ್ಕಾರದ ಗಮನ ಸೆಳೆಯುವಂತೆ ಕ್ಷೇತ್ರಾದ್ಯಂತ ಸ್ತ್ರೀಶಕ್ತಿಯಲ್ಲಿ ಜಾಗೃತಿ ತರಬೇಕು. ನ್ಯಾಯವಾದಿಗಳು, ವೈದ್ಯರು, ಸಮಾಜದ ಚಿಂತಕರು ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.

ಚಿಮ್ಮಇದಲಾಯಿ ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯ, ನಿವೃತ್ತ ನ್ಯಾಯಾಧೀಶ ಜಿ.ಕೆ. ಗೋಖಲೆ, ಪ್ರಗತಿಪರ ರೈತ ಅಶೋಕ ಪಾಟೀಲ್, ವೀರಶೆಟ್ಟಿ ಇಮಡಾಪುರ, ಡಾ.ಕಿಶನರಾವ ಕಾಟಾಪುರ, ಕೆ.ಎಂ. ಬಾರಿ, ನ್ಯಾಯವಾದಿ ಮಾಣಿಕರಾವ ಗುಲಗುಂಜಿ, ಸತೀಶಕುಮಾರ ಅಭಿಪ್ರಾಯ ಮಂಡಿಸಿದರು.

ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ನರಸಮ್ಮ ಆವಂಟಿ, ಸೌಭಾಗ್ಯಮ್ಮ ಕನಕಪುರ, ಚಂದ್ರಶೆಟ್ಟಿ ಜಾಧವ್, ಶಶಿಕಾಂತ ಆಡಕಿ, ಭೀಮಶೆಟ್ಟಿ ಮುರುಡಾ, ಸೂರ್ಯಕಾಂತ ಹುಲಿ, ನಂದಿಕುಮಾರ ಪಾಟೀಲ್, ಸುರೇಶ ದೇಶಪಾಂಡೆ, ಹಣಮಂತ ಪೂಜಾರಿ, ಜಗದೀಶ ಗೌನೂರ, ನರ್ಮದಾ ಪಾಟೀಲ್, ವಿಜಯಲಕ್ಷ್ಮೀ, ಕರಬಸಮ್ಮ ಪಾರಾ, ಶರಣಮ್ಮ ಸಜ್ಜನಶೆಟ್ಟಿ, ಕವಿತಾ ಹಡಪದ, ಸಾಜೀದಾ ಬೇಗಂ ಇತರರಿದ್ದರು.

ಪುರುಷ ಪ್ರಧಾನ ಸಮಾಜದಲ್ಲಿ ಪತಿಯೇ ದೇವರೆಂದು ಭಾವಿಸಿದ ಮಹಿಳೆಯರು ಪತಿ, ಮಕ್ಕಳು ಮದ್ಯಪಾನಿಗಳಾಗಿ ಸಂಕಷ್ಟಕ್ಕೆ ಸಿಲುಕಿದರೂ ಗೌರವಕ್ಕಾಗಿ ವಿಷಯ ಪ್ರಸ್ತಾಪಿಸಲು ಭಯ ಪಡುತ್ತಾರೆ. ಆದರೆ ಇಂತಹ ಹೋರಾಟಕ್ಕೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದು ಸಂಪೂರ್ಣ ಬೆಂಬಲ ಸೂಚಿಸುತ್ತೇವೆ.
| ನರಸಮ್ಮ ಆವಂಟಿ ಅಧ್ಯಕ್ಷೆ, ಸ್ತ್ರೀಶಕ್ತಿ ಒಕ್ಕೂಟ ಚಿಂಚೋಳಿ

ಮದ್ಯಪಾನಮುಕ್ತ ಕ್ಷೇತ್ರವಾಗಿಸುವ ನಮ್ಮ ಹೋರಾಟ ಮಾರಾಟ ಮಾಡುವವರ ವಿರುದ್ಧ ಅಲ್ಲ. ಸರ್ಕಾರದ ವಿರುದ್ಧ. ಮದ್ಯಪಾನದಿಂದ ಅನೇಕ ಕುಟುಂಬಗಳು ವಿನಾಶವಾಗಿದ್ದು, ಮಹಿಳೆಯರು ವಿಧವೆ, ಮಕ್ಕಳು ತಬ್ಬಲಿಗಳಾಗಿದ್ದಾರೆ. ಇದನ್ನು ತಪ್ಪಿಸಲು ಸೇಂದಿ ಬಂದ್ ಮಾಡಿದಂತೆ ಮದ್ಯಪಾನವೂ ನಿಲ್ಲಿಸುವಂತೆ ಸಿಎಂ ಬಳಿ ನಿಯೋಗ ತೆರಳಲು ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆ ಹಾಗೂ ಸ್ತ್ರೀಶಕ್ತಿ ಜಾಗೃತಿ ಅಭಿಯಾನ ಆರಂಭಿಸಲಾಗುವುದು.
| ಶಿವಶರಣಪ್ಪ ಜಾಪಟ್ಟಿ ಅಧ್ಯಕ್ಷ, ಅಖಿಲ ಭಾರತ ರೈತ ಸಂರಕ್ಷಣಾ ಸಮಿತಿ ಚಿಂಚೋಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net