

ಬೆಳಗಾವಿ : ದುಶ್ಚಟಗಳಿಗೆ ಖರ್ಚು ಮಾಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಪುಸ್ತಕಗಳಿಗೆ ವಿನಯೋಗಿಸಿದರೆ ವ್ಯಸನಮುಕ್ತ ಸಮಾಜವಾಗುವುದು ಎಂದು ಸಾಹಿತಿ, ಪ್ರವಚನಕಾರ ಸಿದ್ದಣ್ಣ ಲಂಗೋಟಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮದಿನ ದಿನ ಪ್ರಯುಕ್ತ ವ್ಯಸನಮುಕ್ತ ದಿನಾಚರಣೆಯಲ್ಲಿ ಮಾತನಾಡಿದರು.
ದುಶ್ಚಟಗಳಿಗೆ ದಾಸರಾಗಿ ತಮ್ಮ ಇಡೀ ಜೀವನವನ್ನು ಹಾಳು ಮಾಡಿಕೊಂಡು ದುಡಿದ ಹಣವನ್ನು ವ್ಯಸನಗಳಿಗೆ ಖರ್ಚು ಮಾಡಿ ಮದ್ಯಪಾನ ಸೇವನೆಯಿಂದ ಪ್ರಜ್ಞಾಹೀನರಾಗಿ ಅನೇಕ ದುಷ್ಕೃತ್ಯಗಳನ್ನು ಮಾಡುವ ಮೂಲಕ ತಾವು ಹಾಳಾಗುವುದಲ್ಲದೆ ತಮ್ಮೊದಿಗಿರುವ ಇರುವ ಕುಟುಂಬ, ಗ್ರಾಮ, ರಾಜ್ಯ, ದೇಶ, ವಿದೇಶಗಳಲ್ಲಿರುವ ಜನರನ್ನೂ ಸಹ ಹಾಳು ಮಾಡುತ್ತಾರೆ ಆದ್ದರಿಂದ ಜನ ಜಾಗೃತರಾಗಿ ವ್ಯಸನಮುಕ್ತರಾರಗಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮಾತನಾಡಿ, ತಮ್ಮ ವೈಯಕ್ತಿಕ ಜೀವನನ್ನು ಮುಡಿಪಾಗಿಟ್ಟು, ಜೋಳಿಗೆ ತೆಗೆದುಕೊಂಡು ಮನೆ ಮನೆಗೆ ಭೇಟಿ ನೀಡಿ, ಸಮಾಜದ ಜನರಲ್ಲಿ ದುಶ್ಚಟಗಳ ಬಗ್ಗೆ ಮಾಹಾಂತ ಶಿವಯೋಗಿಗಳು ಅರಿವು ಮೂಡಿಸಿದ್ದಾರೆ. ದುಶ್ಚಟಗಳಿಂದ ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿನ ಮೇಲೆಯೂ ಇದರ ಪರಿಣಾಮ ಬೀರುತ್ತದೆ. ಮಕ್ಕಳು ಮುಗ್ದರು, ದುಶ್ಚಟಗಳ ಅರಿವು ಇರುವುದಿಲ್ಲ ಆದ್ದರಿಂದ ಇಂತಹ ಶಿವಯೋಗಿಗಳ ತತ್ವ ಸಿದ್ಧಾಂತಗಳನ್ನು ತಿಳಿದುಕೊಂಡು ದುಶ್ಚಟಗಳಿಂದ ದೂರವಿರಬೇಕು. ತಾವು ಇರುವುದಷ್ಟೇ ಅಲ್ಲದೇ ತಮ್ಮ ಸಹಪಾಠಿಗಳು ಅಥವಾ ಸ್ನೇಹಿತರು ದುಶ್ಚಟಗಳನ್ನು ಮಾಡುತ್ತಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಹೇಳಿದರು.
ಡಿಡಿಪಿಐ ಬಸವರಾಜ ನಾಲತವಾಡ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ
ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಚಾಂದನಿ ದೇವಡಿ, ನಗರ ಬಿಇಒ ಲೀಲಾವತಿ ಹಿರೇಮಠ ಸೇರಿದಂತೆ ಮತ್ತಿತರರಿದ್ದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.