

ಮಾಕವಳ್ಳಿ ಸಿ.ರವಿ ಕೆ.ಆರ್.ಪೇಟೆ
ಹೇಮಾವತಿ ನದಿ ಪಕ್ಕದಲ್ಲಿರುವ ಗ್ರಾಮ ಮಡುವಿನಕೋಡಿ. ನದಿಯಲ್ಲಿ ಹೆಚ್ಚಾಗಿ ಆಳದ ಮಡುಗಳು ಇದ್ದ ಕಾರಣ ಗ್ರಾಮಕ್ಕೆ ಮಡುವಿನಕೋಡಿ ಎಂಬ ಹೆಸರು ಬಂದಿದೆ.
ಹಿಂದೆ ಗ್ರಾಮಕ್ಕೆ ಕಾಲರಾ ಸಾಂಕ್ರಾಮಿಕ ರೋಗ ಬಂದ ಮೇಲೆ ಪ್ರತಿದಿನ ಗ್ರಾಮದಲ್ಲಿ ಸಾವಿಗೆ ತುತ್ತಾಗುತ್ತಿದ್ದರು. ಪರಿಣಾಮ ಗ್ರಾಮವನ್ನು ಬಿಟ್ಟು ಗ್ರಾಮಸ್ಥರು ಮೇಲ್ಭಾಗಕ್ಕೆ ಬಂದು ನೆಲೆ ನಿಂತರು. ಹಳೇ ಗ್ರಾಮದಲ್ಲಿದ್ದ ಮನೆಗಳು ಪಾಳುಬಿದ್ದು ನಾಶವಾಗಿವೆ. ಹಳೇ ಗ್ರಾಮದಲ್ಲಿ ಚೋಳರ ಕಾಲದ ರಾಮಲಿಂಗೇಶ್ವರ ದೇವಸ್ಥಾನವಿದೆ. ಹಿಂದು ದೇವಸ್ಥಾನವನ್ನು ನಾಶಪಡಿಸುತ್ತಾರೆ ಎಂಬ ಆತಂಕದಿಂದ ಹಿಂದೆ ಸಂಪೂರ್ಣ ಮಣ್ಣಿನಿಂದ ಮುಚ್ಚಿದ್ದಾರೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ಹಳೇ ಊರಿನಲ್ಲಿ ಮಸಣಿಕಮ್ಮ(ಗದ್ದೆ ಅಮ್ಮ) ಹಾಗೂ ಹಿರಿದೇವಮ್ಮ ದೇವಸ್ಥಾನಗಳಿವೆ. ಈಗಲೂ ಪೂಜೆ ಪುನಸ್ಕಾರಗಳು ನೆರವೇರುತ್ತಿವೆ. ಹಳೇ ಗ್ರಾಮದಲ್ಲಿ ಈಗ ಒಂದು ಕುಟುಂಬವೂ ಜೀವನ ನಡೆಸುತ್ತಿಲ್ಲ.
ಹೊಸ ಗ್ರಾಮದಲ್ಲಿ 10ಸಾವಿರ ಕುಟುಂಬಗಳಿವೆ. ಒಕ್ಕಲಿಗರು, ಕುಂಬಾರರು, ಗಾಣಿಗರು, ಮುಸ್ಲಿಂ, ನಾಯಕರು, ಬ್ರಾಹ್ಮಣರು, ಲಿಂಗಾಯತರು, ಪರಿಶಿಷ್ಟ ಜಾತಿ-ಪಂಗಡ, ಮಡಿವಾಳರು, ವಿಶ್ವಕರ್ಮ, ಹಾವಾಡಿಗರು ಇದ್ದಾರೆ. ಒಕ್ಕಲಿಗರು ಬಹು ಸಂಖ್ಯಾತರಾಗಿದ್ದು, ಉಳಿದವರು ಅಲ್ಪಸಂಖ್ಯಾತರಾಗಿದ್ದಾರೆ. ಗ್ರಾಮದಲ್ಲಿ ಎಲ್ಲ ಸಮಾಜದವರು ಸಾಮರಸ್ಯದಿಂದ ಬದುಕುತ್ತಿದ್ದಾರೆ.
ಗ್ರಾಮವನ್ನು ಹೇಮಾವತಿ ನದಿ ಸುತ್ತುವರಿದಿದೆ. ಗ್ರಾಮದಲ್ಲಿ ಎಲ್ಲರೂ ಕೃಷಿ, ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಕೃಷಿಗೆ ನೀರಾವರಿ ಸೌಲಭ್ಯಕ್ಕಾಗಿ ಮಂದಗೆರೆ ಎಡದಂಡೆ ನಾಲೆ ಮತ್ತು ಹೇಮಗಿರಿ ಹಳೆ ನಾಲೆಗಳಿವೆ. ಗ್ರಾಮದ ಎಲ್ಲ ಜಮೀನಿಗೂ ನೀರಾವರಿ ಸಂಪೂರ್ಣ ಸೌಲಭ್ಯವಿದೆ. ಪ್ರಮುಖವಾಗಿ ಭತ್ತ, ಕಬ್ಬು, ತೆಂಗು, ಅಡಕೆ, ಶುಂಠಿ, ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಡೇರಿ(ಬಿಎಂಸಿ), ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘ, ಗ್ರಾಮ ಪಂಚಾಯಿತಿ, ಅಂಚೆ ಕಚೇರಿ ಇದೆ.
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ 24*7 ಆರೋಗ್ಯ ಸೇವೆ ನೀಡಲು ಕಟ್ಟಡ ನಿರ್ಮಿಸಲಾಗಿದೆ. ಮೂರು ವರ್ಷದಿಂದ ಉದ್ಘಾಟನೆ ಭಾಗ್ಯ ಸಿಗದೆ ನನೆಗುದಿಗೆ ಬಿದ್ದಿದೆ. ನಾಲ್ಕೈದು ಸಾವಿರ ಜನಸಂಖ್ಯೆ ಇದ್ದರೂ ಬ್ಯಾಂಕಿಂಗ್ ಸೇವೆ ಇಲ್ಲದಿರುವುದು ಗ್ರಾಮಸ್ಥರು ಬೇರೆ ಊರಿಗೆ ಅಲೆದಾಡುವಂತಾಗಿದೆ. ಹೈನುಗಾರಿಕೆ ಹಿನ್ನೆಲೆ ಹೆಚ್ಚಿನ ಜಾನುವಾರುಗಳಿದ್ದು, ಗ್ರಾಮಕ್ಕೆ ಪಶು ಆಸ್ಪತ್ರೆ ಬೇಡಿಕೆ ಇದೆ. ಮಡುವಿನಕೋಡಿ ಗ್ರಾಮದಲ್ಲಿ ಗ್ರಾ.ಪಂ. ಕಚೇರಿ ಇದೆ. ಇದರ ವ್ಯಾಪ್ತಿಗೆ ದೊಡ್ಡಯಾಚೇನಹಳ್ಳಿ, ಮೆಳ್ಳಹಳ್ಳಿ, ಹೊಸಕೋಟೆ, ಮದ್ದಿಕ್ಯಾಚಮನಹಳ್ಳಿ ಸೇರುತ್ತವೆ.
ಗ್ರಾಮದ ಪರಮೇಶ್ ಮತ್ತು ಮಂಜುಳಾ ದಂಪತಿಯ ಮಗ ಮನೋಹರ್( ಕೋಳಿ ಕಳ್ಳ) ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ ಶೋನಲ್ಲಿ ಸ್ಪರ್ಧಿಸಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮದ ಎಂ.ಬಿ.ಹರೀಶ್ ಮನ್ಮುಲ್ ನಿರ್ದೇಶಕರಾಗಿ ಮೂರು ಬಾರಿ ಆಯ್ಕೆ ಆಗಿದ್ದಾರೆ. ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಸ್ವತಂತ್ರೃಹೋರಾಟಗಾರರಿದ್ದರು. ದಿ.ಸಿದ್ದೇಗೌಡ, ಬಳ್ಳಾರಿಗೌಡ ಹೋರಾಟದಲ್ಲಿ ಪಾಲ್ಗೊಂಡಿದ್ದರು
ಗ್ರಾಮದಲ್ಲಿ ಎರಡು ಬಸವನಗುಡಿ, ರಾಮಲಿಂಗಶ್ವರ, ಗಣಪತಿ, ನವಗ್ರಹ, ಆಂಜನೇಯ, ರಾಮಮಂದಿರ, ಮಾರಮ್ಮನ ದೇವಸ್ಥಾನಗಳಿವೆ. ಆಂಜನೇಯಸ್ವಾಮಿ ದಕ್ಷಿಣಾಭಿಮುಖವಾಗಿ ನೆಲೆ ನಿಂತಿರುವುದು ಇಲ್ಲಿನ ವಿಶೇಷ. ದೇವರ ಮೂರ್ತಿ ಯುದ್ಧಕ್ಕೆ ತೆರಳುವ ಮಾದರಿಯಲ್ಲಿ ನಿರ್ಮಿಸಿದ್ದಾರೆ.
ಪ್ರತಿ ವರ್ಷ ಗ್ರಾಮದಲ್ಲಿ ಮಾರ್ಚ್ ತಿಂಗಳಿನಲ್ಲಿ ಆಂಜನೇಯಸ್ವಾಮಿ ದೇವರ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಜಾತ್ರೆಗೆ ಪೂರ್ವ ಮಾರಮ್ಮನಿಗೆ ವಿಶೇಷ ಪೂಜೆ ನೆರವೇರಿಸಿ ದೇವಿಗೆ ಕಳಸ ಕನ್ನಡಿ ಮೆರವಣಿಗೆ ನಡೆಸಿ ಜಾತ್ರೆ ನಿಗದಿ ಮಾಡಲಾಗುತ್ತದೆ. ಜಾತ್ರೆಯ ಮೊದಲನೆ ದಿನ ಹೂವಿನ ರಥದಲ್ಲಿ ಆಂಜನೇಯನ ಉತ್ಸವಮೂರ್ತಿ ಮೆರವಣಿಗೆ, ಎರಡನೇ ಪಲ್ಲಕ್ಕಿ ಉತ್ಸವ, ಮೂರನೇ ದಿನ ರಥೋತ್ಸವ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ರಥೋತ್ಸವದಲ್ಲಿ ಡೊಳ್ಳು ಕುಣಿತ, ನಗಾರಿ, ತಮಟೆ, ಸಿಡಿಮದ್ದು ಜಾತ್ರೆಯ ಕಳೆಯನ್ನು ಇಮ್ಮಡಿಗೊಳಿಸುತ್ತವೆ.
ಗ್ರಾಮದ ಈಶ್ವರ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ಶಿವರಾತ್ರಿ ಹಬ್ಬದಲ್ಲಿ ಈಶ್ವರನಿಗೆ ವಿಶೇಷ ಪೂಜೆ ಪುನಸ್ಕಾರಗಳು, ಅಭಿಷೇಕ ನೆರವೇರುತ್ತವೆ. ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನಡೆಯುತ್ತದೆ. ಭಕ್ತರು ಶಿವರಾತ್ರಿ ಜಾಗರಣೆಗೆ ಸಂಗೀತ, ಹರಿಕಥೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಗ್ರಾಮಸ್ಥರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಿಂತನೆ ನಡೆಸುತ್ತಿದ್ದಾರೆ.
ಹಳೇ ಗ್ರಾಮದಲ್ಲಿ ಗದ್ದೆ ಮಸಣಿಕಮ್ಮ (ಗದ್ದೆ ಅಮ್ಮ) ದೇವಸ್ಥಾನವಿದೆ. ದೇವಿ ಶಕ್ತಿ ದೇವತೆಯಾಗಿದ್ದಾಳೆ. ದೇವಿಗೆ ತಾಲೂಕಿನಾದ್ಯಂತ ಅಪಾರ ಭಕ್ತರಿದ್ದಾರೆ. ಹರಕೆ ಹೊತ್ತ ಭಕ್ತರು ದೇವಿ ವಿಗ್ರಹವನ್ನು ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ತದನಂತರ ಸನ್ನಧಿಗೆ ಹಿಂದಿರುಗಿಸುತ್ತಾರೆ. ಕಷ್ಟ ನಿವಾರಣೆಗೆ ದೇವಿ ಬಳಿ ಭಕ್ತರು ತಡೆ ಒಡೆಸುತ್ತಾರೆ. ನಾಮಕರಣ, ಬೀಗರ ಊಟ ಸೇರಿದಂತೆ ಹಲವು ಕಾರ್ಯಗಳನ್ನು ನೆರವೇರಿಸುತ್ತಾರೆ. ದೇವಿ ಸನ್ನಿಧಿಯಲ್ಲಿ ಶುಭಕಾರ್ಯ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ದೇವಿಗೆ ಪರಿಶಿಷ್ಟ ಜಾತಿಯವರು ಅರ್ಚಕರಾಗಿದ್ದಾರೆ. ವರ್ಷಕ್ಕೊಮ್ಮೆ ಮಸಣಿಕಮ್ಮ ಹಬ್ಬ ನಡೆಯುತ್ತದೆ. ಪರಿಶಿಷ್ಟ ಜಾತಿ ಅವರು ಹಬ್ಬ ಮಾಡುತ್ತಾರೆ. ಗ್ರಾಮಸ್ಥರೆಲ್ಲ ಜಾತಿ ಭೇದವಿಲ್ಲದೆ ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ.