

ಪಾವಗಡ: ಕರೊನಾ ತಡೆಗೆ ಅಸಡ್ಡೆ ತೋರುವ ತಾಲೂಕು ಮಟ್ಟದ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಎಚ್ಚರಿಸಿದರು.
ಪಟ್ಟಣದ ಹೊರ ವಲಯದ ಅಂಬೇಡ್ಕರ್ ಭವನದಲ್ಲಿ ಕರೊನಾ ನಿಯಂತ್ರಿಸಲು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಆರೋಗ್ಯಾಧಿಕಾರಿ ನಿರ್ಲಕ್ಷ್ಯ ಹೆಚ್ಚಾಗಿದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸದೆ ನಿರ್ಲಕ್ಷ ತೋರುತ್ತಿರುವ ದೂರುಗಳು ಬಂದಿವೆ, ಕೂಡಲೇ ಕ್ರಮ ಜರುಗಿಸುವಂತೆ ಡಿಎಚ್‌ಒ ನಾಗೇಂದ್ರಪ್ಪಗೆ ಆದೇಶಿಸಿದರು.
ತಹಸೀಲ್ದಾರ್ ಮತ್ತು ತಾಪಂ ಇಒಗಳು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದು, ಪಟ್ಟಣ ಸೇರಿ ಗ್ರಾಮೀಣ ಭಾಗದ ಜನರ ಕಷ್ಟ ಕೇಳಲು ಸ್ಥಳಕ್ಕೆ ಹೋಗುತ್ತಿಲ್ಲ, ಜಿಲ್ಲೆಯ ಬೇರೆ ತಾಲೂಕಿನಲ್ಲಿ ಮಹಿಳಾ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಕಲಿಯಿರಿ ಎಂದು ತಿಳಿಸಿದರು. ಅಂಗನವಾಡಿ ನೌಕರರು ಗ್ರಾಮದ ಪ್ರತೀ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯದ ಮಾಹಿತಿ ಪಡೆದು ಪಟ್ಟಿ ತಯಾರಿಸಿ ವರದಿ ನೀಡುವಂತೆ ಸಿಡಿಪಿಒ ಶಿವಣ್ಣಗೆ ತಾಕೀತು ಮಾಡಿದರು.
ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಕೋವಿಡ್ ಸೇರಿ ಇತರ ರೋಗಗಳ ಮಾಹಿತಿ ಪಡೆದು ರೋಗದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಟಿಎಚ್‌ಒ ತಿರುಪತಯ್ಯಗೆ ಸಚಿವರು ಎಚ್ಚರಿಸಿದರು. ಶಾಸಕ ವೆಂಕಟರವಣಪ್ಪ ಮಾತನಾಡಿ, ಕರೊನಾ ನಿಯಂತ್ರಿಸುವಲ್ಲಿ ಜನರಲ್ಲಿ ಅಧಿಕಾರಿಗಳ ಬಗ್ಗೆ ಇದ್ದ ವಿಶ್ವಾಸ ಕಡಿಮೆಯಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷತೆ ಹಾಗೂ ಬೇಜವಾಬ್ದಾರಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಿವೈಎಸ್ಪಿ ಪ್ರವೀಣ್, ತಹಸೀಲ್ದಾರ್ ವರದರಾಜು, ತಾಪಂ ಇಒ ನರಸಿಂಹಮೂರ್ತಿ, ಟಿ.ಎಚ್.ಒ ತಿರುಪತಯ್ಯ, ಪುರಸಭೆಯ ನವೀನ್ ಚಂದ್ರ, ಸಿ.ಐ.ನಾಗರಾಜು, ಪಿಎಸೈ ನಾಗರಾಜು, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು
2 ಸಾವಿರ ಆ್ಯಂಟಿ ರ‌್ಯಾಪಿಡ್ ಕಿಟ್: ಕರೊನಾಗೆ ಸಂಬಂಧಿಸಿದಂತೆ ಜಿಲ್ಲೆಗೆ ತುರ್ತಾಗಿ 2 ಸಾವಿರ ಆ್ಯಂಟಿ ರ‌್ಯಾಪಿಡ್ ಕಿಟ್ ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಕಿಟ್‌ಗಳಿಗಾಗಿ ಮಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕರೊನಾ ಸೋಂಕು ಪತ್ತೆಯ ಫಲಿತಾಂಶ ಬರುವುದು ತಡವಾಗಿ ಬಹಳಷ್ಟು ತೊಂದರೆಯಾಗಿತ್ತು. ಸೋಂಕು ಪತ್ತೆಗೆ 10 ದಿನ ತೆಗೆದುಕೊಳ್ಳಲಾಗುತ್ತಿತ್ತು. ಈಗ ಒಂದು ಗಂಟೆಯೊಳಗೆ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.