ಧಾರ್ಮಿಕ ಪ್ರಜ್ಞೆಯಿಂದ ಆಸ್ತಿಕ ಸಮಾಜ ನಿರ್ಮಾಣ : ಶ್ರೀ ಉದಿತ್ ಚೈತನ್ಯ ಸ್ವಾಮೀಜಿ ಆಶೀರ್ವಚನ

30
Published on

ಮಧೂರು: ಸನಾತನ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಮಕ್ಕಳಲ್ಲಿ ಹಿಂದು ಅನುಷ್ಠಾನಗಳ ಬಗ್ಗೆ ಪ್ರಜ್ಞೆ ಮೂಡಿಸಬೇಕು. ಮಕ್ಕಳಲ್ಲಿ ಹಿಂದು ಸಂಸ್ಕೃತಿಯ ಮೌಲ್ಯ ಉದ್ದೀಪಿಸಬೇಕು. ಧಾರ್ಮಿಕ ಅರಿವು ಇಲ್ಲದಿದ್ದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಧಾರ್ಮಿಕ ಪ್ರಜ್ಞೆ ಬೆಳೆದಂತೆ ಆಸ್ತಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ಭಾಗವತಂ ವಿಲೇಜ್ ಟ್ರಸ್ಟ್ ಸಂಸ್ಥಾಪಕ ಶ್ರೀ ಉದಿತ್ ಚೈತನ್ಯ ಸ್ವಾಮೀಜಿ ಹೇಳಿದರು.

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆ ಅಂಗವಾಗಿ ಸೋಮವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನುವಂಶಿಕ ಮೊಕ್ತೇಸರ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಪ್ರತಿಯೊಬ್ಬ ಹಿಂದು ಜಾಗೃತನಾಗಬೇಕು. ಆ ಮೂಲಕ ಸಂಸ್ಕೃತಿ, ಆಚಾರ, ವಿಚಾರ ಉಳಿಸಲು ಸಾಧ್ಯ. ಹಿಂದು ಸಂಸ್ಕಾರ ಮಾನವೀಯ ಮೌಲ್ಯ ಕಲಿಸುತ್ತದೆ. ಹಿಂದು ಸಂಸ್ಕೃತಿ ಉಳಿದ್ದಲ್ಲಿ ವಿಶ್ವ ಕಲ್ಯಾಣ ಎಂದರು.

ವಕೀಲ ಎಂ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಪ್ರಾಂತ್ಯ ಅಧ್ಯಕ್ಷ ಕೃಷ್ಣ ನಂಬೂದಿರಿ ಮುಲ್ಲಪ್ಪಳ್ಳಿ ಉಪಸ್ಥಿತರಿದ್ದರು. ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಎಡನೀರು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುಧಾಕರ ಕೋಟಕುಂಜತ್ತಾಯ, ಉಪ್ಪಳ ಪಚ್ಲಂಪಾರೆ ಶ್ರೀ ಚೌಡಿ ಚಾಮುಂಡೇಶ್ವರಿ ಆರಾಧಕ ಬಾಬು ಯು.ಪಚ್ಲಂಪಾರೆ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಮೊದಲಾದವರು ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಮುರಳಿ ಕುಮಾರ್ ಬಂದಡ್ಕ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ಶಂಕರ್ ಸಾರಡ್ಕ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net