ಮಧುರೆ ಕ್ರಾಸ್‌ನಲ್ಲಿ ಮಳೆ ಅವಾಂತರ

mmm
Published on

 ವಿಜಯವಾಣಿ ಸುದ್ದಿಜಾಲ ಮಧುರೆ

ಸಣ್ಣ ಮಳೆಗೂ ಅವಾಂತರ ಸೃಷ್ಟಿಯಾಗುವ ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಮಧುರೆ ಕ್ರಾಸ್‌ನಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ.

ಚರಂಡಿಗಳ ಅಪೂರ್ಣ ಕಾಮಗಾರಿ, ಚರಂಡಿಗಳೆ ಇಲ್ಲದಿರುವುದು ಹಾಗೂ ಬೀದಿ ಬದಿ ವ್ಯಾಪಾರಿಗಳ ಒತ್ತುವರಿ ಪರಿಣಾಮವಾಗಿ ಪ್ರತಿ ಮಳೆಯಲ್ಲಿಯೂ ಮಧುರೆ ಕ್ರಾಸ್‌ನಲ್ಲಿನ ರಸ್ತೆಯಲ್ಲಿ ಅವಾಂತರ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಇದುವರೆಗೆ ಇಲ್ಲಿನ ಸಮಸ್ಯೆ ನಿವಾರಣೆಗೆ ಹೆದ್ದಾರಿ ಪ್ರಾಧಿಕಾವಾಗಲಿ, ಗ್ರಾಮ ಪಂಚಾಯಿತಿಯಾಗಲಿ ಗಮನ ನೀಡದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಸಂಪರ್ಕಿಸುವ ಹೆದ್ದಾರಿಯಲ್ಲಿ ಹಾದು ಹೋಗುವ ಮಧುರೆ ಕ್ರಾಸ್ ಜನಸಂದಣಿ ಪ್ರದೇಶವಾಗಿದ್ದು, ಪ್ರತಿ ಮಳೆಗಾಲದಲ್ಲೂ ಸಮಸ್ಯೆ ಎದುರಿಸುವಂತಾಗಿದೆ, ಇತ್ತೀಚಿಗೆ ಸುರಿದ ಮಳೆಯಲ್ಲಿಯೂ ಸ್ಥಳೀಯರು ಪರದಾಡುವಂತಾಗಿತ್ತು, ಇಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ವಾಹನಗಳ ಸಂಚಾರವಿದೆ, ಮುಖ್ಯರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗವಿಲ್ಲದೆ ಸಾರ್ವಜನಿಕರು ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಿದೆ, ಮಳೆಗಾಲದಲ್ಲಿ ರಸ್ತೆಯಲ್ಲಿಯೇ ಮಳೆ ನೀರು ಹರಿಯುವುದರಿಂದ ಪಾದಚಾರಿಗಳ ಸಂಚಾರಕ್ಕೆ ಸಂಚಾಕಾರ ತಂದೊಡ್ಡುತ್ತಿದೆ.

ಬೀದಿ ಬದಿ ವ್ಯಾಪಾರ ಒತ್ತುವರಿ: ಹೆದ್ದಾರಿ ಪ್ರಾಧಿಕಾರದ ವತಿಯಿಂದ ಮುಖ್ಯ ರಸ್ತೆ ಅಭಿವೃದ್ಧಿಯಾಗಿದ್ದರೂ ರಸ್ತೆಯ ಎರಡೂ ಬದಿ ಸಮರ್ಪಕವಾಗಿ ಚರಂಡಿಗಳ ವ್ಯವಸ್ಥೆ ಆಗಿಲ್ಲ, ಕೆಲವು ಕಡೆಗಳಲ್ಲಿ ಚರಂಡಿಗಳ ಅಪೂರ್ಣ ಕಾಮಗಾರಿಯಿಂದಾಗಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ, ಇದರ ಜತೆಗೆ ಇಲ್ಲಿನ ಹೂ ಹಣ್ಣು, ವ್ಯಾಪಾರಿಗಳು, ಹೋಟೆಲ್ ಮತ್ತಿತರ ವ್ಯಾಪಾರಿಗಳು ಚರಂಡಿಗಳ ಮೇಲೆಯೇ ಅಂಗಡಿಗಳನ್ನು ತೆರೆದಿದ್ದಾರೆ ಬಹುತೇಕರು ರಸ್ತೆಗೆ ಹೊಂದಿಕೊಂಡಂತೆ ಅಂಗಡಿಗಳನ್ನು ಹಾಕಿಕೊಂಡಿರುವುದರಿಂದ ಮಳೆ ನೀರು ಹರಿಯಲು ಸೂಕ್ತ ಜಾಗವೇ ಇಲ್ಲದಂತಾಗಿದೆ, ಇದರಿಂದಾಗಿ ಮಳೆ ಸುರಿದ ವೇಳೆ ನೀರು ರಸ್ತೆಯಲ್ಲಿ ಹರಿಯುತ್ತದೆ.

ತಂಗುದಾಣ ನೇಪಥ್ಯ: ಮಧುರೆ ಕ್ರಾಸ್‌ನಲ್ಲಿ ಬಸ್ ತಂಗುದಾಣವಿದ್ದರೂ ಬೀದಿ ಬದಿ ವ್ಯಾಪಾರಿಗಳ ಒತ್ತುವರಿಯಿಂದಾಗಿ ಪ್ರಯಾಣಿಕರು ಬಸ್‌ಗಾಗಿ ರಸ್ತೆಯಲ್ಲಿಯೇ ನಿಂತು ಕಾಯುವಂತಾಗಿದೆ, ಬಸ್ ತಂಗುದಾಣ ನಿರ್ವಹಣೆ ಕೊರತೆಯಿಂದ ಮಳೆಗಾಲದಲ್ಲಿ ಆವರಣ ಕೆಸರುಗದ್ದೆಯಂತಾಗುತ್ತದೆ ತಂಗುದಾಣಕ್ಕೆ ಹೊಂದಿಕೊಂಡಂತೆ ಹರಿಯುವ ಮಳೆ ನೀರಿನ ನಡುವೆಯೇ ಪ್ರಯಾಣಿಕರು ಕಾಯುತ್ತ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಮಳೆ ನೀರಿನ್ನು ದಾಟಿಕೊಂಡು ರಸ್ತೆ ದಾಟಲು ಸರ್ಕಸ್ ಮಾಡುವ ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕುವ ಅಪಾಯವಿದೆ.

ಅಪಾಯಕಾರಿ ಮರದಕೊಂಬೆಗಳು: ರಸ್ತೆಯ ಎರಡೂ ಬದಿ ಸಾಕಷ್ಟು ಮರಗಳಿದ್ದು ಹಲವು ಮರಗಳಲ್ಲಿನ ಕೊಂಬೆಗಳು ರಸ್ತೆಯಲ್ಲಿ ಚಾಚಿ ಕೆಳಗೆ ಬಾಗಿವೆ, ಜೋರು ಮಳೆಗಾಳಿಗೆ ಯಾವಾಗ ಬೇಕಾದರೂ ಕೊಂಬೆಗಳು ಮುರಿದು ಬೀಳುವ ಅಪಾಯವಿದೆ, ಆದರೆ ಸಂಬಂಧಪಟ್ಟವರು ಇಂಥ ಕೊಂಬೆಗಳ ತೆರವಿಗೆ ಮುಂದಾಗಿಲ್ಲ ಎಂಬುದು ಸ್ಥಳೀಯರು ಆತಂಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net