

ಮಂಡ್ಯ: ಮಂಡ್ಯದಲ್ಲಿ ನಾಟಕ ಮತ್ತು ಕಲಾವಿದರಿಗೆ ಹೆಚ್ಚಿನ ಮನ್ನಣೆ ಇದೆ. ಜಿಲ್ಲೆಯ ಡ್ರಾಮಾ ಸೀನರಿ, ಕಲಾವಿದರು ಎಂದರೆ ಬೇರೆ ಜಿಲ್ಲೆಗಳಿಗೆ ಒಂದು ರೀತಿಯ ಸಂತೋಷ ಎಂದು ಮೈಸೂರಿನ ಅಬಕಾರಿ ಅಧೀಕ್ಷಕ ವಿಜಯಕುಮಾರ್ ಹೇಳಿದರು.
ನಗರದ ಹೊಸಹಳ್ಳಿ ಬಸವೇಶ್ವರ ದೇವಸ್ಥಾನ ಮುಂಭಾಗ ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯದ ಸೀನರಿ ಮತ್ತು ಕಲಾವಿದರು ಎಂಬುದನ್ನು ದಪ್ಪ ಅಕ್ಷರದಲ್ಲಿ ಕರಪತ್ರಗಳನ್ನು ಮುದ್ರಿಸಿ ಪ್ರಚಾರ ಮಾಡುವುದನ್ನೂ ಒಂದು ಕಾಲದಲ್ಲಿ ನೋಡಿದ್ದೆವು ಎಂದು ನೆನಪು ಮಾಡಿಕೊಂಡರು.
ಮನುಷ್ಯನ ನಾಗರಿಕತೆ ಪ್ರಾರಂಭವಾದಾಗಲೇ ನಾಟಕ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು. ಧರ್ಮ, ದೇವರನ್ನು ಸೃಷ್ಠಿ ಮಾಡಿದ ನಂತರದ ದಿನಗಳಲ್ಲಿ ದೇವರನ್ನು ಮೆಚ್ಚಿಸಲು ನಾಟಕ, ನೃತ್ಯವನ್ನು ಮಾನವ ಸೃಷ್ಠಿ ಮಾಡುತ್ತಾನೆ. ಮೊದಲೆಲ್ಲ ಭಾವ, ಮೂಕಾಭಿನಯದ ಮೂಲಕ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿತ್ತು. ಕಾಲ ಕ್ರಮೇಣ ಅದಕ್ಕೆ ಮಾತುಗಳ ಜೋಡಣೆಯನ್ನು ಮಾಡಲಾಯಿತು ಎಂದ ಅವರು, ಗ್ರೀಕ್ ನಾಗರಿಕತೆಯ ಮೊದಲ ದೇವತೆ ಎಂದರೆ ಡಯಾನಿಸ್. ಆ ದೇವತೆಯನ್ನು ಮೆಚ್ಚಿಸಲು ಗ್ರೀಕ್ ಜನರು ಸಂಗೀತ, ನಾಟ್ಯ, ನಟನೆಯನ್ನು ಪ್ರಾರಂಭಿಸಿದರು ಎಂದರು.
ಭಾರತದಲ್ಲಿ ಮೂಲವಾಗಿ ಭರತಮುನಿ ನಾಟ್ಯಶಾಸದಲ್ಲಿ ಸಾಕಷ್ಟು ವಿಸ್ತೃತವಾಗಿ ಚರ್ಚೆ ಮಾಡುತ್ತಾರೆ. ಮೂಲ ಪಾತ್ರವನ್ನು ರಂಗದ ಮೇಲೆ ಪಾತ್ರದಾರಿ ಪ್ರೇಕ್ಷಕರಿಗೆ ಮನಮುಟ್ಟುವಂತೆ ಹೇಳುವಂತಹ ಕಲೆಯನ್ನು ನಾಟಕ ಎಂದೂ ಕರೆಯಲಾಗುತ್ತದೆ. ನೋಡುವವರನ್ನು ಪ್ರೇಕ್ಷಕ ಎಂದು ಕರೆಯುವುದಿಲ್ಲ. ಅವರನ್ನು ಸಹೃದಯದವರು ಎಂದು ಕರೆಯುತ್ತಾರೆ. ಮೂಲ ಪಾತ್ರಧಾರಿಗಳು ಬೇರೆಯೇ ಆದರೂ, ಅವರು ಅದನ್ನು ಅನುಭವಿಸಿ ಅಭಿನಯಿಸುತ್ತಾರೆ. ಅವರು ಹೇಗೆ ನಟನೆ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ನಾಟಕಗಳು ನಿಂತಿರುತ್ತದೆ. ಅದೇ ರೀತಿ ಮಧುರ ಮಂಡ್ಯ ರಂಗ ಕಲಾಟ್ರಸ್ಟ್ ಸಹ ಉತ್ತಮವಾಗಿ ಬೆಳೆದು ಕಲಾವಿದರು ಹೆಚ್ಚು ನಟನಾ ಕೌಶಲವನ್ನು ಪಡೆದುಕೊಂಡು ಯಶಸ್ವಿಯತ್ತ ಸಾಗಲಿ ಎಂದು ಹೇಳಿದರು.
ಮಧುರ ಮಂಡ್ಯ ರಂಗಕಲಾ ಟ್ರಸ್ಟ್ ಅಧ್ಯಕ್ಷ ಡಾ.ಎ.ವಿ.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ರಂಗನಿರ್ದೇಶಕರಾದ ಕೃಷ್ಣರಾಜು, ಗುರುಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ನಗರಸಭಾ ಸದಸ್ಯೆ ಪವಿತ್ರಾ ಬೋರೇಗೌಡ, ಡ್ರಾಮಾ ಸೀನರಿ ಮಾಲೀಕ ಶಂಕರಪ್ಪ, ಮುಖಂಡರಾದ ಎಚ್.ಕೆ.ಶಂಕರೇಗೌಡ, ರಾಮಲಿಂಗೇಗೌಡ, ಡಿ.ನಾಗೇಶ್ ಇತರರಿದ್ದರು.
ಚಿತ್ರಕಲಾ ವಿದ್ವಾಂಸ ನರಸಿಂಹಚಾರ್, ಹಿರಿಯ ಕಲಾವಿದ ವೆಂಕಟೇಶ್, ತಾಳವಾದ್ಯ ಕಲಾವಿದ ಗುರುರಾಜ್ ಅವರನ್ನು ಸನ್ಮಾನಿಸಲಾಯಿತು. ರಂಗಗೀತೆ ನಿರ್ದೇಶಕ ಕಿರಗಸೂರು ರಾಜಪ್ಪ, ರಂಗಕಲಾವಿದರಾದ ರಾಧ, ಶಾಂತ ಅವರು ರಂಗಗೀತೆ ಪ್ರಸ್ತುತಪಡಿಸಿದರು.