

ವೆಂಕಟೇಶ ಗುಡೆಪ್ಪನವರ
ಮುಧೋಳ: ಮದ್ರಾಸ್ ಐ ಸೋಂಕು ನಗರ ಸೇರಿ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಅದರಲ್ಲೂ ಮುಖ್ಯವಾಗಿ ಶಾಲೆ, ಕಾಲೇಜು,ಹಾಸ್ಟೆಲ್ ಮಕ್ಕಳನ್ನು ಬೆಂಬಿಡದೆ ಕಾಡುತ್ತಿದೆ.
ಕಳೆದ ಒಂದು ವಾರದಿಂದ ಗ್ರಾಮೀಣ, ನಗರ ಪ್ರದೇಶದಲ್ಲಿ ಕಣ್ಣಿನ ಸೋಂಕು ಕಾಣಿಸಿಕೊಂಡು ಜನರನ್ನು ಹೈರಾಣಾಗಿಸಿದೆ. ಶಾಲಾ ಮಕ್ಕಳಲ್ಲಿ ಕಣ್ಣಿನ ವೈರಾಣು ವೇಗವಾಗಿ ಹರಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ತ್ವರಿತವಾಗಿ ಮದ್ರಾಸ್ ಐ ಹರಡಿ ಮಕ್ಕಳನ್ನು ಹೈರಾಣ ಮಾಡಿದೆ. ಒಬ್ಬರಿಂದ ಹಲವಾರು ಜನರಿಗೆ ಹರಡುವ ಕಣ್ಣಿನ ಸೋಂಕಿನಿಂದ ಆಸ್ಪತ್ರೆಗೆ ಎಡತಾಕುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಶಾಲೆಯಲ್ಲಿ ದಿನಕ್ಕೆ ಕನಿಷ್ಠ ಐದರಿಂದ ಮೂವತ್ತು ವಿದ್ಯಾರ್ಥಿಗಳಿಗೆ ಸೋಂಕು ಹರಡುತ್ತಿದೆ. ಮದ್ರಾಸ್ ಐ ಬಂದಿರುವವರ ಕಣ್ಣು ದಿಟ್ಟಿಸಿ ನೋಡಿದರೆ ಸೋಂಕು ನೋಡುವವರಿಗೆ ಅಂಟಿಕೊಳ್ಳುವುದಿಲ್ಲ. ಬದಲಾಗಿ ಅವರು ಬಳಸಿರುವ ವಸ್ತು, ಟವೆಲ್, ಸೋಪು, ಸಾಮಗ್ರಿಗಳನ್ನು ಮುಟ್ಟಿದರೆ ಬರುತ್ತದೆ ಎನ್ನುತ್ತಾರೆ ನೇತ್ರತಜ್ಞ ವೈದ್ಯರು.
ತಾಲೂಕಿನಾದ್ಯಂತ ಮದ್ರಾಸ್ ಐ ಸೋಂಕಿನಿಂದ ಅನೇಕ ಜನರು ಬಳಲುತ್ತಿದ್ದು, ಕಣ್ಣು ಬೇನೆ ನಿವಾರಣೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದರೆ ಅಲ್ಲಿ ನೇತ್ರ ತಜ್ಞರಿಲ್ಲದ್ದಕ್ಕೆ ರೋಗಿಗಳು ಪರದಾಡುವಂತಾಗಿದೆ. ಪ್ರತಿನಿತ್ಯ 50 ರಿಂದ 70 ಕೇಸ್‌ಗಳು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಮಾಹಿತಿ ಇದೆ. ಆದರೆ, ಕಣ್ಣು ಬೇನೆಯಿಂದ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಂಬುದು ಗಗನಕುಸುಮವಾಗಿದೆ. ಈ ಮೊದಲಿದ್ದ ನೇತ್ರತಜ್ಞರು ಕೆಲ ತಿಂಗಳ ಹಿಂದೆ ಇಲ್ಲಿಂದ ವರ್ಗಾವಣೆಗೊಂಡ ಮೇಲೆ ಬೇರೆ ನೇತ್ರತಜ್ಞರ ನಿಯೋಜನೆಯಾಗಿಲ್ಲ. ಆಸ್ಪತ್ರೆಯಲ್ಲಿರುವ ಕೆಳಹಂತದ ಸಿಬ್ಬಂದಿಯಿಂದಲೇ ಪ್ರಾಥಮಿಕ ಚಿಕಿತ್ಸೆ ಮುಂದುವರಿದಿದೆ. ಖಾಸಗಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ಬಡವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಸಮಾಧಾನ ಪಡುವಂತಾಗಿದೆ.
ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರತಜ್ಞರು ಇಲ್ಲದ್ದಕ್ಕೆ ನಗರದಲ್ಲಿರುವ ಬೆರಳೆಣಿಕೆಯಷ್ಟು ಕಣ್ಣಿನ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮದ್ರಾಸ್ ಐ ಯಿಂದ ಕಣ್ಣು ಉರಿ, ಕಣ್ಣು ಕೆಂಪಾಗುವುದು, ನಿರಂತರವಾಗಿ ನೀರು ಬರುವುದು ಸೇರಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಕಣ್ಣಿನ ನೋವು ತಾಳದ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿ ಚಿಕಿತ್ಸೆಗಾಗಿ ಅಪಾರ ಹಣ ವ್ಯಯಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ನೇತ್ರತಜ್ಞರನ್ನು ನೇಮಿಸುವಂತೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಮದ್ರಾಸ್ ಐ ಹೆಚ್ಚಾಗುವ ಹೊತ್ತಿನಲ್ಲಿಯೇ ಹಿಂದಿನ ನೇತ್ರತಜ್ಞರು ವರ್ಗಾವಣೆಗೊಂಡಿದ್ದಾರೆ. ಅವರ ಜಾಗಕ್ಕೆ ಬೇರೆಯವರನ್ನು ನಿಯೋಜಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ಇದುವರೆಗೂ ನೇತ್ರತಜ್ಞ ವೈದ್ಯರ ನೇಮಕವಾಗಿಲ್ಲ ಎಂಬ ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ.
ಕಣ್ಣಿನ ಸೋಂಕು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವುದರಿಂದ ಬಸ್ ಪ್ರಯಾಣಿಕರಲ್ಲೂ ಇದು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ವೇಗವಾಗಿ ಹರಡುತ್ತದೆ. ಕಣ್ಣಿನ ಸೋಂಕು ಬಂದವರು ಪ್ರತ್ಯೇಕವಾಗಿ ಇರುವುದರಿಂದ ಇನ್ನೊಬ್ಬರಿಗೆ ಹರಡುವುದು ಕಡಿಮೆಯಾಗುತ್ತದೆ. ಕಣ್ಣಿನ ಸೋಂಕು ಕೆಲವರಿಗೆ ಒಂದೆರಡು ದಿನಗಳಲ್ಲಿ ಔಷಧೋಪಚಾರ ಮಾಡಿದ ನಂತರ ಕಡಿಮೆಯಾದರೆ, ಇನ್ನೂ ಕೆಲವರಿಗೆ ಒಂದು ವಾರದ ತನಕವೂ ಇರುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳುತ್ತಾರೆ.
ಆಸ್ಪತ್ರೆಯಲ್ಲಿ ನೇತ್ರ ತಜ್ಞರು ಇಲ್ಲ, ಹಿಂದೆ ಇದ್ದ ನೇತ್ರತಜ್ಞರು ವರ್ಗಾವಣೆಯಾದ ಮೇಲೆ ಸಾರ್ವಜನಿಕರ ಅನುಕೂಲಕ್ಕಾಗಿ ನೇತ್ರ ಚಿಕಿತ್ಸೆ ವಿಭಾಗದ ತಂತ್ರಜ್ಞರೇ ಚಿಕಿತ್ಸೆ ನೀಡುತ್ತಿದ್ದಾರೆ. ಮದ್ರಾಸ್ ಐ ಹೆಚ್ಚು ಬಾಧಿಸುವ ವೈರಸ್ ಅಲ್ಲ. ಸಾರ್ವಜನಿಕರು ಆತಂಕ ಬಿಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು. ಎ.ಎ. ಸೂರ್ಯವಂಶಿ, ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ
ಕಣ್ಣುಗಳನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ಬಟ್ಟೆ ಬಳಸಬೇಕು. ಕಣ್ಣುಗಳನ್ನು ಉಜ್ಜಬಾರದು. ತಾತ್ಕಾಲಿಕವಾಗಿ ಕಪ್ಪು ಕನ್ನಡಕಗಳನ್ನು ಬಳಸಬೇಕು. ಕಣ್ಣುಗಳಿಗೆ ಯಾವುದೇ ಹನಿ ಹಾಕುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಮದ್ರಾಸ್ ಐ ಬಂದಿರುವವರು ಉಪಯೋಗಿಸಿದ ವಸ್ತುಗಳನ್ನು ಬಳಕೆ ಮಾಡಿದರೆ ಆರೋಗ್ಯವಂತರಿಗೂ ಇದು ಹಬ್ಬುತ್ತದೆ. ಡಾ.ವೆಂಕಟೇಶ ಮಲಘಾಣ ಟಿಎಚ್‌ಒ ಮುಧೋಳ
ನಮ್ಮ ಕುಟುಂಬದಲ್ಲಿ ಆರಂಭದಲ್ಲಿ ಒಬ್ಬರಿಗೆ ಮದ್ರಾಸ್ ಐ ಬಂದಿತ್ತು. ಈಗ ಎಲ್ಲರಿಗೂ ಬಂದಿದೆ. ಶಾಲಾ ಮಕ್ಕಳಲ್ಲೂ ಈ ಸೋಂಕು ಹೆಚ್ಚು ಕಾಣಿಸಿಕೊಂಡಿದೆ. ಶಂಕ್ರಯ್ಯ ಹಿರೇಮಠ, ಮುಖ್ಯಶಿಕ್ಷಕರು